×
Ad

ಉಡುಪಿ: ಸಿಎ ವಿದ್ಯಾರ್ಥಿಗಳ ಅ.ಭಾ.ಮಟ್ಟದ ಸಮಾವೇಶ

Update: 2017-01-05 22:14 IST

ಉಡುಪಿ, ಜ.5: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಉಡುಪಿ ಶಾಖೆ ಹಾಗೂ ಉಡುಪಿ ಸಿಎ ವಿದ್ಯಾರ್ಥಿಗಳ ಸಂಘದ ವತಿಯಿಂದ ಜ.13 ಹಾಗೂ 14ರಂದು ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಎರಡು ದಿನಗಳ ಅಖಿಲ ಭಾರತ ಮಟ್ಟದ ಸಿಎ ವಿದ್ಯಾರ್ಥಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಶಾಖೆಯ ಅಧ್ಯಕ್ಷ ಗಣೇಶ ಬಿ.ಕಾಂಚನ್ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಅಖಿಲ ಭಾರತ ಮಟ್ಟ ಸಿಎ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ನೇರ ತೆರಿಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಲೆಕ್ಕಶಾಸ್ತ್ರ (ಆಡಿಟಿಂಗ್, ಅಕೌಂಟಿಂಗ್), ಮಾಹಿತಿ ತಂತ್ರಜ್ಞಾನದಂತಹ ವಿಷಯಗಳ ಮೇಲೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.

ಸಮಾವೇಶವನ್ನು ಜ.13ರಂದು ಅಪರಾಹ್ನ 12:00ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ.ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಕೇಂದ್ರ ಕಚೇರಿಯ ಅಧ್ಯಕ್ಷ ದೇವರಾಜ ರೆಡ್ಡಿ ಮುಖ್ಯ ಅತಿಥಿಗಳಾಗಿರುವರು. ಸಂಸ್ಥೆಯ ಬಾಬು ಅಬ್ರಹಾಮ್ ಕಲ್ಲಿವಯಲಿಲ್, ಮಧುಕರ್ ಹಿರೇಗಂಗೆ, ಎಂ.ಪಿ.ವಿಜಯಕುಮಾರ್,ಫಲ್ಗುಣ ಕುಮಾರ್, ಕೋತಾ ಎಸ್.ಶ್ರೀನಿವಾಸ್, ಬಾಬು ಕೆ.ತೇವರ್ ಉಪಸ್ಥಿತರಿರುವರು.

14ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಆದಾಯ ತೆರಿಗೆ ಮುಖ್ಯ ಆಯುಕ್ತ ನರೋತ್ತಮ್ ಮಿಶ್ರಾ ಮುಖ್ಯ ಅತಿಥಿಗಳಾಗಿರುವರು.

ಅಖಿಲ ಭಾರತ ಮಟ್ಟದ ಸಿಎ ವಿದ್ಯಾರ್ಥಿಗಳ ಸಮಾವೇಶ ಇದೇ ಮೊದಲ ಬಾರಿ ಉಡುಪಿಯಲ್ಲಿ ನಡೆಯುತಿದ್ದು, ದೇಶದ ವಿವಿದೆಡೆಗಳಿಂದ 800ರಿಂದ 1000 ಮಂದಿ ಸಿಎ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ ದೇಶದ ಪ್ರಸ್ತುತ ಆರ್ಥಿಕ ಹಾಗೂ ಇನ್ನಿತರ ವಿಷಯಗಳ ಕುರಿತು ಚರ್ಚೆಯೂ ನಡೆಯಲಿದೆ. 14ರಂದು ಬೆಳಗ್ಗೆ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರು ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರೇಖಾ ದೇವಾನಂದ್, ಖಜಾಂಚಿ ಮಹೀಂದ್ರ ಶೆಣೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ನಾಯಕ್, ಪ್ರದೀಪ್ ಜೋಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News