×
Ad

ಜ.7: ಗೃಹರಕ್ಷಕ ದಳದ ವಲಯ ಮಟ್ಟದ ಕ್ರೀಡಾಕೂಟ

Update: 2017-01-05 22:18 IST

ಉಡುಪಿ, ಜ.5: ಗೃಹರಕ್ಷಕ ದಳದ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟ ಉಡುಪಿ ಜಿಲ್ಲಾ ಗೃಹರಕ್ಷಕ ದಳದ ನೇತೃತ್ವದಲ್ಲಿ ಉಡುಪಿಯ ಚಂದು ಮೈದಾನದಲ್ಲಿ ಜ.7ರಿಂದ 9ರವರೆಗೆ ನಡೆಯಲಿದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಲಯ ಕ್ರೀಡಾಕೂಟದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 140ಕ್ಕೂ ಅಧಿಕ ಗೃಹರಕ್ಷಕ-ರಕ್ಷಕಿಯರು ಪಾಲ್ಗೊಳ್ಳುವರು ಎಂದರು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರು ವಲಯ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.

 ವಲಯ ಮಟ್ಟದಲ್ಲಿ ವಿಜೇತರಾದ ಒಟ್ಟು 50 ಮಂದಿ ಕ್ರೀಡಾಪಟುಗಳು ಬೆಂಗಳೂರಿನಲ್ಲಿ ನಡೆಯುವ ಆರು ವಲಯಗಳು ಪಾಲ್ಗೊಳ್ಳುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವರು ಎಂದರು.

ವಲಯ ಮಟ್ಟದ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜ.7ರಂದು ಸಂಜೆ 4:00 ಗಂಟೆಗೆ ಚಂದುಮೈದಾನದಲ್ಲಿ ಉದ್ಘಾಟಿಸುವರು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ, ಅಂತಾರಾಷ್ಟ್ರೀಯ ಅಥ್ಲೀಟ್ ರೋಹಿತ್‌ಕುಮಾರ ಕಟೀಲ್, ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಗಳಾಗಿರುವರು.

ಜ.9ರ ರವಿವಾರ ಸಂಜೆ 4:00ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕ, ಗೃಹರಕ್ಷಕ ದಳದ ಹೆಚ್ಚುವರಿ ಮಹಾಮಾದೇಷ್ಟ ಹಾಗೂ ಪದನಿಮಿತ್ತ ಹೆಚ್ಚುವರಿ ನಿರ್ದೇಶಕ ಪೌರರಕ್ಷಣೆ ಎನ್. ಶಿವಕುಮಾರ್ ಮುಖ್ಯ ಅತಿಥಿಗಳಾಗಿರುವರು. ನಿಟ್ಟೆ ವಿವಿಯ ಉಪಕುಲಪತಿ ಡಾ.ರಮಾನಂದ ಶೆಟ್ಟಿ, ಯುಪಿಸಿಎಲ್‌ನ ಕಿಶೋರ್ ಆಳ್ವ, ಉದ್ಯಮಿ ಕಿಶೋರ್ ಶೆಟ್ಟಿ ಉಪಸ್ಥಿತರಿರುವರು.

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರಿಗೆ 100ಮೀ., 800ಮೀ., ರಿಲೇ, ಹೈಜಂಪ್, ಲಾಂಗ್‌ಜಂಪ್, ಗುಂಡುಎಸೆತ, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗೆ 100ಮೀ, 400ಮೀ ರಿಲೇ, ವೃತ್ತಿಪರ ಕ್ರೀಡೆಯಲ್ಲಿ ಪ್ರಥಮ ಚಿಕಿತ್ಸೆ ಸ್ಪರ್ಧೆ, ಅಗ್ನಿ ಶಮನ ಸ್ಪರ್ಧೆ, ರೆಸ್ಕೂ ಸ್ಪರ್ಧೆ ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎರಡನೇ ಕಮಾಂಡೆಂಟ್ ಕೆ.ಸಿ.ರಾಜೇಶ್, ಡೆಪ್ಯುಟಿ ಕಮಾಂಡೆಂಟ್ ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News