’ಸೃಜನಶೀಲ ಬರವಣಿಗೆ ಮತ್ತು ವಿದ್ಯಾರ್ಥಿಗಳು’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ
ಮೂಡುಬಿದಿರೆ,ಜ.5: ಜೀವನ ಪ್ರೀತಿ ಬಹಳ ಮುಖ್ಯ. ಅದಿಲ್ಲದಿದ್ದರೆ ಸಾಹಿತ್ಯ ಹುಟ್ಟಲು ಸಾಧ್ಯವಿಲ್ಲ ಎಂದು ಮಂಗಳೂರು ಬೆಸೆಂಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ ಎಂದು ಹೇಳಿದರು.
ಶ್ರೀ ಧವಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಗುರುವಾರ ನಡೆದ ’ಸೃಜನಶೀಲ ಬರವಣಿಗೆ ಮತ್ತು ವಿದ್ಯಾರ್ಥಿಗಳು’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಸನ್ನಿವೇಶ, ಸನ್ನಿವೇಶ, ಸಂದರ್ಭ ಹಾಗೂ ಸಂವೇದನೆಯ ಭಾವನೆಗಳನ್ನು ಬೆಳೆಸಿ ಅನುಭವ ಪೂರಿತವಾದಂತಹ ಸೃಜನಶೀಲ ಬರವಣಿಗೆಗಳನ್ನು ರಚಿಸಲು ವಿದ್ಯಾರ್ಥಿಗಳು ತೊಡಗಬಹುದು. ಸಾಹಿತ್ಯದ ರಚನೆಗೆ ಬಹುಮುಖ್ಯವಾಗಿ ಬೇಕಾಗಿರುವುದು ಸಂವೇದನೆ. ಸಂವೇದನೆಗೆ ಅನುಗುಣವಾಗಿ ಭಾಷೆಯನ್ನು ಬಳಸಿ ಭಾವನೆಗಳನ್ನು ಹೆಣೆದು ಸಾಹಿತ್ಯದ ರಚನೆ ಮಾಡಬೇಕು. ಸೃಜನಶೀಲ ರಚನೆಗಳನ್ನು ಮಾಡುವಾಗ ನಮ್ಮ ಮನಸ್ಸು ತೆರೆದ ಪುಸ್ತಕದಂತಿರಬೇಕು. ನಮ್ಮ ಅನುಭವಕ್ಕೆ ಬರುವ ಎಲ್ಲಾ ವಿಚಾರಗಳನ್ನು ತಲೆಯೊಳಗಿರಿಸಿಕೊಂಡು ಮುಂದೆ ಬರವಣಿಗೆ ಸಂದರ್ಭದಲ್ಲಿ ಬಳಸಬಹುದಾಗಿದೆ ಎಂದವರು ಹೇಳಿದರು.
ಪ್ರಾಚಾರ್ಯ ಪ್ರೊ.ಎಂ.ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್ ಪ್ರಸ್ತಾವಿಕವಾಗಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಆನ್ಸಿಲ್ ಪ್ರಿಸ್ಟನ್ ಸೆರಾವೊ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ನಾಯಕ್ ವಂದಿಸಿದರು.