×
Ad

ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ರಚನೆ

Update: 2017-01-05 23:18 IST

ಮೂಡುಬಿದಿರೆ,ಜ.5: ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಗಾಗಿ ಅಗತ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಇಲ್ಲಿನ ರೋಟರಿ ಕ್ಲಬ್ ಮುಂದಾಳುತ್ವದಲ್ಲಿ ಮೂಡುಬಿದಿರೆ ಪ್ರೆಸ್ ಕ್ಲಬ್, ಕೃಷಿ ವಿಚಾರ ವಿನಿಮಯ ಕೇಂದ್ರ, ಮೂಡುಬಿದಿರೆ ಪುರಸಭೆ ಹಾಗೂ ನಾಗರಿಕರ ಸಹಯೋಗದೊಂದಿಗೆ ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ರೋಟರಿ ಸಮ್ಮೀಲನ್ ಸಭಾಭವನದಲ್ಲಿ ಗುರುವಾರ ನಡೆದ ಸಮಾಲೋಚನ ಸಭೆಯಲ್ಲಿ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 18 ಕೆರೆಗಳಿಗಾಗಿ ಹೆಸರಾದ ಮೂಡುಬಿದಿರೆಯ ಹಲವು ಕೆರೆಗಳ ಕಣ್ಮರೆಯಾಗುವ ಸ್ಥಿತಿಯಲ್ಲಿದ್ದು ಅವುಗಳಲ್ಲಿ ಕನಿಷ್ಠ 6 ಕೆರೆಗಳಿಗೆ ಕಾಯಕಲ್ಪ ನೀಡುವ ಜೊತೆಗೆ, ಸಾಧ್ಯವಾದಲ್ಲಿ ಒಡ್ಡುಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿ ಯೋಜನೆ ರೂಪಿಸಿದೆ. ಪುರಸಭೆಯಿಂದ ಕೊರೆಸಲಾದ ಬೋರ್‌ವೆಲ್‌ಗಳಲ್ಲಿ ನೀರಿಲ್ಲದ 31 ಬೋರ್‌ವೆಲ್‌ಗಳಿಗೆ ನೀರು ಮರುಪೂರಣ ಮಾಡುವ ಕೆಲಸ ಅನುಷ್ಠಾನವಾಗುವಲ್ಲಿಯೂ ಸಮಿತಿ ಸಹಕರಿಸಲಿದೆ. ಸರಕಾರ, ಸ್ಥಳೀಯಾಡಳಿತ ಮತ್ತು ಸಂಘ ಸಂಸ್ಥೆಗಳಲ್ಲಿ ಲಭ್ಯವಿರುವ ಅನುದಾನವನ್ನು ಸೂಕ್ತ ಜಲಸಂರಕ್ಷಣಾ ಯೋಜನೆಗಳಿಗೆ ಸಮರ್ಪಕವಾಗಿ ಬಳಕೆಯಾಗುವಂತೆ ಮಾಡಲು ಜಲಸಂರಕ್ಷಣಾ ಸಮಿತಿ ಶ್ರಮಿಸಲಿದೆ. ರೋಟರಿ ಕ್ಲಬ್ ಮುಂದಾಳತ್ವದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಜಲ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ಸಮಿತಿ ಸಹಭಾಗಿತ್ವ ವಹಿಸಲಿದೆ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಚಿಂತನೆ ನಡೆಸಿ, ಸಾರ್ವಜನಿಕರಲ್ಲಿ ಜನಜಾಗೃತಿ ರೂಪಿಸುವ ಜೊತೆಗೆ ಸರಕಾರ ಮತ್ತು ಇತರ ಮೂಲಗಳಿಂದ ಲಭ್ಯ ಅನುದಾನಗಳಿಂದ ಮಾಡಬಹುದಾದ ಜಲ ಸಂರಕ್ಷಣಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮೂಡುಬಿದಿರೆ ಜಲ ಸಂರಕ್ಷಣಾ ಸಮಿತಿ ಸಹಕರಿಸಲಿದೆ.

 ಕೃಷಿ,ಜಲಸಂರಕ್ಷಣೆಯಲ್ಲಿ ತಜ್ಞರಾಗಿರುವ ಡಾ.ಎಲ್.ಸಿ ಸೋನ್ಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಿ.ಕೆ ಥೋಮಸ್ ಕಾರ್ಯಾಧ್ಯಕ್ಷರಾಗಿದ್ದು, ಜೈಸನ್ ತಾಕೋಡೆ( ಕಾರ್ಯದರ್ಶಿ),ರಾಜವರ್ಮ ಬೈಲಂಗಡಿ(ಉಪಾಧ್ಯಕ್ಷ) ಅನಂತಕೃಷ್ಣ ರಾವ್ (ಕೋಶಾಧಿಕಾರಿ), ವಿನೋದ್ ಸೆರಾವೋ(ಜೊತೆ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.

ಮಹಮ್ಮದ್ ಶರೀಫ್, ಡಾ.ಮುರಳೀಕೃಷ್ಣ, ಸುಭಾಶ್ಚಂದ್ರ ಚೌಟ, ರತ್ನಾಕರ ದೇವಾಡಿಗ, ಡಾ.ಸುದೀಪ್ ಕುಮಾರ್, ಶ್ರೀಕಾಂತ್ ರಾವ್, ಸೀತಾರಾಮ ಆಚಾರ್ಯ, ಅಲ್ವಿನ್ ಮೆನೇಜಸ್, ಜಿನೇಂದ್ರ ಹೆಗ್ಡೆ, ಧನಂಜಯ ಮೂಡುಬಿದಿರೆ, ಸುರೇಶ್ ಕೋಟ್ಯಾನ್, ಮಕ್ಬೂಲ್ ಹುಸೇನ್, ಲವೀನಾ ತಾಕೋಡೆ, ದಿನೇಶ್, ಯಶೋಧರ ಬಂಗೇರ, ಕೊರಗಪ್ಪ ಕಾರ್ಯಕರಣಿ ಸಮಿತಿಯ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News