ದಶಕದೊಳಗೆ ರಕ್ಷಣಾ ಬಜೆಟ್‌ನಲ್ಲಿ ಶೇ.50ರಷ್ಟು ಕಡಿತ: ಸುಭಾಷ್ ಭಾಮ್ರೆ
ಹೈದರಾಬಾದ್, ಜ.5: ಮುಂದಿನ 2028ರ ವೇಳೆ ಭಾರತದಲ್ಲಿ ವಿದೇಶದ ಮೂಲ ಪರಿಕರ ಉತ್ಪಾದನಾ ಸಂಸ್ಥೆಗಳು ಸುಮಾರು 14 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮೊತ್ತದ ರಕ್ಷಣಾ ಉತ್ಪನ್ನಗಳನ್ನು ಸ್ಥಳೀಯವಾಗಿ ಉತ್ಪಾದಿಸಲಿವೆ ಎಂದು ತಿಳಿಸಿರುವ ರಕ್ಷಣಾ ಇಲಾಖೆಯ ಉಪಸಚಿವ ಸುಭಾಷ್ ಆರ್.ಭಾಮ್ರೆ, ಒಂದು ದಶಕದೊಳಗೆ ರಕ್ಷಣಾ ಬಜೆಟ್‌ನಲ್ಲಿ ಶೇ.50ರಷ್ಟು ಕಡಿತಗೊಳಿಸುವ ಸೂಚನೆಯನ್ನು ನೀಡಿದ್ದಾರೆ. ರಕ್ಷಣಾ ಉದ್ಯಮವು ಭಾರೀ ವಿದೇಶ ವಿನಿಮಯ ಗಳಿಸುವ ಸಂಭಾವ್ಯತೆ ಹೊಂದಿದ್ದು ಈ ಮೂಲಕ ಸ್ವಾವಲಂಬನೆಯ ಗುರಿಯತ್ತ ದೇಶವನ್ನು ಮುನ್ನಡೆಸಲು ಶಕ್ತವಾಗಿದೆ ಎಂದವರು ಹೇಳಿದರು. ಇಲ್ಲಿನ ಡಿಫೆನ್ಸ್ ಮ್ಯಾನೇಜ್‌ಮೆಂಟ್ ಕಾಲೇಜು ಏರ್ಪಡಿಸಿದ್ದ 'ರಾಷ್ಟ್ರನಿರ್ಮಾಣ ಶಕ್ತಿಯಾಗಿ ರಕ್ಷಣಾ ವೆಚ್ಚದ ಸಾಮರ್ಥ್ಯ' ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದ ತೃತೀಯ ಬಲಿಷ್ಠ ಸೇನಾಪಡೆಯನ್ನು ಹೊಂದಿರುವ ಭಾರತವು ತನ್ನ ಒಟ್ಟು ಬಜೆಟ್‌ನಲ್ಲಿ ಶೇ.40ರಷ್ಟು ಮೊತ್ತವನ್ನು ಬಂಡವಾಳ ಒಟ್ಟುಗೂಡಿಸಲು ಮತ್ತು ಶೇ.60ರಷ್ಟು ಮೊತ್ತವನ್ನು ರಕ್ಷಣಾ ಅಗತ್ಯಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಬಳಸುತ್ತಿದೆ. ಮುಂದಿನ ದಶಕದೊಳಗೆ ರಕ್ಷಣಾ ಅಗತ್ಯಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಮೂಲಕ ರಕ್ಷಣಾ ಬಜೆಟ್‌ನಲ್ಲಿ ಶೇ.50ರಷ್ಟು ಕಡಿತಗೊಳಿಸಲು ಸರಕಾರ ಮಹತ್ವ ನೀಡುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ರಕ್ಷಣಾ ಉತ್ಪನ್ನಗಳ ಕ್ಷೇತ್ರದಲ್ಲಿ ಹೊಸತನ ತರುವ ತುರ್ತು ಅಗತ್ಯವಿದೆ. ಉತ್ಪಾದನಾ ವೆಚ್ಚ ಕಡಿಮೆಗೊಳಿಸಲು ಶಕ್ತರಾಗುವ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸಬೇಕಿದೆ ಎಂದವರು ನುಡಿದರು. ಕೇಂದ್ರ ಸರಕಾದ 'ಮೇಕ್ ಇನ್ ಇಂಡಿಯಾ' ಅಭಿಯಾನದ ಕಾರಣ ರಕ್ಷಣಾ ಕ್ಷೇತ್ರದ ಅಗತ್ಯಗಳನ್ನು ಸ್ಥಳೀಯವಾಗಿಯೇ ಈಡೇರಿಸಲು ಸಾಧ್ಯವಾಗಲಿದೆ. ಅಲ್ಲದೆ ಸುಮಾರು 1 ಮಿಲಿಯನ್‌ನಷ್ಟು ಪ್ರತ್ಯಕ್ಷ, ಪರೋಕ್ಷ ಉದ್ಯೋಗ ದೊರೆಯಲಿದೆ ಎಂದ ಅವರು, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಪಾಲುದಾರಿಕೆಯಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ಕಾರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೂಪುರೇಷೆ ತಯಾರಿಸಲಾಗುತ್ತಿದೆ. ಸಾಗರೋತ್ತರ ಮಾರಾಟಕ್ಕೆ ಬೆಂಬಲ ನೀಡುವ ಮತ್ತು ಉತ್ಪನ್ನವೊಂದರ ಜೀವಾವಧಿಯವರೆಗೂ ಮಾರಾಟ ನಂತರದ ಸೇವೆ ಮತ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸುವ ವ್ಯವಸ್ಥೆಯನ್ನು ಸಾರ್ವಜನಿಕ ಕ್ಷೇತ್ರದ ರಕ್ಷಣಾ ಉದ್ದಿಮೆಗಳು ಅಳವಡಿಸಿಕೊಳ್ಳಬೇಕಿದೆ ಎಂದವರು ಹೇಳಿದರು. ಖಾಸಗಿ ಕ್ಷೇತ್ರದ ಸಂಸ್ಥೆಗಳು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಬಗ್ಗೆ ಬೊಟ್ಟು ಮಾಡಿದ ಅವರು, ಇದೇ ರೀತಿ ಖಾಸಗಿ ಸಂಸ್ಥೆಗಳು ಮತ್ತು ವಿದೇಶಿ ಸಂಸ್ಥೆಗಳು ರಕ್ಷಣಾ ವ್ಯವಸ್ಥೆಗಳ ಉತ್ಪಾದನೆಯಲ್ಲೂ ತೊಡಗಿಕೊಳ್ಳಬೇಕು ಎಂದರು.