×
Ad

ಕೇಜ್ರಿವಾಲ್‌ರನ್ನು ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ಒತ್ತಡ

Update: 2017-01-05 23:44 IST

ಹೊಸದಿಲ್ಲಿ,ಜ.5: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ತನ್ನ ಪತ್ರದಲ್ಲಿ ಸಿಬಿಐ ತನಗೆ ಚಿತ್ರಹಿಂಸೆಯನ್ನು ನೀಡಿತ್ತು ಎಂದು ಆರೋಪಿಸಿದ್ದಾರಲ್ಲದೆ, ತಾನು ಕೇಜ್ರಿವಾಲ್‌ರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ತನ್ನನ್ನು ಬಿಟ್ಟುಬಿಡುವುದಾಗಿ ತನಿಖಾಧಿಕಾರಿಗಳು ತನ್ನ ವಿಚಾರಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದರು ಎಂಬ ಸ್ಫೋಟಕ ವಿಷಯವನ್ನು ಬಯಲುಗೊಳಿಸಿದ್ದಾರೆ.

ಕುಮಾರ್ 1989ರ ತಂಡದ ಐಎಎಸ್ ಅಧಿಕಾರಿಯಾಗಿ ದ್ದಾರೆ. ಕುಮಾರ್ ಬಯಲುಗೊಳಿಸಿರುವ ಸ್ಫೋಟಕ ವಿಷಯಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಅವರು, ''ಸಿಬಿಐ ನನ್ನ ಕಚೇರಿಯ ಮೇಲೆ ದಾಳಿ ನಡೆಸುತ್ತದೆ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವಂತೆ ಅಧಿಕಾರಿಯ ಮೇಲೆ ಒತ್ತಡ ಹೇರುತ್ತದೆ. ಸಿಬಿಐ ಸತೀಂದ್ರ ಜೈನ್ ಅವರ ಕಚೇರಿಯ ಮೇಲೆ ದಾಳಿ ನಡೆಸುತ್ತದೆ. ಮೋದಿಜೀ, ನಿಮಗೇಕೆ ನಮ್ಮ ಬಗ್ಗೆ ಅಷ್ಟೊಂದು ಭೀತಿ'' ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
2015, ಡಿಸೆಂಬರ್‌ನಲ್ಲಿ ಕುಮಾರ್ ಕಚೇರಿಯ ಮೇಲೆ ದಾಳಿ ನಡೆಸಿದ್ದ ಸಿಬಿಐ ಕಳೆದ ವರ್ಷದ ಜುಲೈನಲ್ಲಿ ಅವರನ್ನು ಬಂಧಿಸಿತ್ತು.
 ''ನನ್ನನ್ನು ಭ್ರಷ್ಟಾಚಾರ ಮತ್ತು ಇತರ ಆರೋಪಗಳಲ್ಲಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಓರ್ವ ಐಎಎಸ್ ಅಧಿಕಾರಿಯಾಗಿ ರಾಜಕೀಯ ನಿಷ್ಪಕ್ಷತೆಯಲ್ಲಿ ನನ್ನ ನಂಬಿಕೆಗಾಗಿ ನಾನು ದುಬಾರಿ ಬೆಲೆ ತೆರುವಂತೆ ಮಾಡಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಉಸಿರುಗಟ್ಟಿಸುವ ಆಡಳಿತಾತ್ಮಕ ವಾತಾವರಣ ನನ್ನ ಅನುಭವಕ್ಕೆ ಬಂದಿದ್ದು, ಕೇಂದ್ರ ಸರಕಾರಿ ಸಂಸ್ಥೆಗಳು ನನ್ನನ್ನು ನ್ಯಾಯಪರ ರೀತಿಯಲ್ಲಿ ನಡೆಸಿಕೊಳ್ಳುವ ಮತ್ತು ನನಗೆ ನ್ಯಾಯವನ್ನು ಒದಗಿಸುವ ಸಾಧ್ಯತೆಗಳು ಕಂಡುಬರುತ್ತಿಲ್ಲ'' ಎಂದು ಕುಮಾರ್ ತನ್ನ ಪತ್ರದಲ್ಲಿ ಬರೆದಿದ್ದಾರೆ.
ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಕುಮಾರ್, ''ಮುಖ್ಯಮಂತ್ರಿ ಕೇಜ್ರಿವಾಲ್‌ರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ನನ್ನನ್ನು ಬಿಟ್ಟುಬಿಡುವುದಾಗಿ ಸಿಬಿಐ ನನಗೆ ಪದೇಪದೇ ಹೇಳಿತ್ತು. ಅದರ ಉದ್ದೇಶ ಅದುವೇ ಆಗಿದ್ದಿರಬಹುದು'' ಎಂದಿದ್ದಾರೆ.
''ಇಷ್ಟೇ ಅಲ್ಲ, ನನ್ನನ್ನು ಮತ್ತು ಮುಖ್ಯಮಂತ್ರಿಗಳನ್ನು ಸಿಲುಕಿಸಲು ಸಿಬಿಐ ಹಲವಾರು ಜನರಿಂದ ತನಗೆ ಬೇಕಾದಂತೆ ಹೇಳಿಕೆಗಳನ್ನು ಪಡೆದುಕೊಳ್ಳಲು ಅವರಿಗೆ ಹಿಂಸೆ ನೀಡಿತ್ತು. ಅಧಿಕಾರಿಗಳ ಹೊಡೆತಗಳಿಂದ ಕೆಲವರಿಗೆ ತೀವ್ರ ಸ್ವರೂಪದ ಶಾಶ್ವತ ಹಾನಿಯೂ ಆಗಿದೆ'' ಎಂದು ಕುಮಾರ್ ಹೇಳಿದ್ದಾರೆ.
ಜುಲೈನಲ್ಲಿ ತನ್ನ ಬಂಧನದ ವೇಳೆ ಕೇಜ್ರಿವಾಲ್‌ಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಮಾರ್ ಅವರನ್ನು ಬಳಿಕ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ತನ್ನ ಅಧೀನದಲ್ಲಿ ಕೆಲಸ ಮಾಡುವಂತೆ 2013, ಡಿಸೆಂಬರ್‌ನಲ್ಲಿ ಕೇಜ್ರಿವಾಲ್ ತನ್ನನ್ನು ಆಹ್ವಾನಿಸಿದ್ದ ಬೆನ್ನಿಗೇ ತನಗೆ ತೊಂದರೆಗಳು ಆರಂಭವಾಗಿದ್ದವು ಎಂದಿದ್ದಾರೆ.
ಇತರ ಎಂಟು ಸಹ ಆರೋಪಿಗಳು ಮತ್ತು ಎಂಡೀವರ್ ಸಿಸ್ಟಮ್ಸ್ ಪ್ರೈ.ಲಿ ಜೊತೆಗೆ ಕುಮಾರ್ ವಿರುದ್ಧ ಕ್ರಿಮಿನಲ್ ಒಳಸಂಚು, ವಂಚನೆ ಮತ್ತು ಫೋರ್ಜರಿ ಆರೋಪಗಳಲ್ಲಿ ಸಿಬಿಐ ಕಳೆದ ತಿಂಗಳು ಆರೋಪಪಟ್ಟಿಯನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News