ಸ್ಮಶಾನದಲ್ಲೂ ಸಾಹಿತ್ಯ ಸಮ್ಮೇಳನ ಮಾಡಲು ಸಿದ್ಧ: ಪುನರೂರು
ಮುಲ್ಕಿ, ಜ.5: (ಕುಬೆವೂರು ಪುಟ್ಟಣ್ಣ ಶೆಟ್ಟಿ ವೇದಿಕೆ): ಸಾಹಿತ್ಯಕ್ಕೆ ಜಾತಿ-ಧರ್ಮ-ಮತ ಭೆೇದಗಳ ಬೇಲಿ ಇಲ್ಲ. ಆದರೆ, ಸಮ್ಮೇಳನವನ್ನು ದೇವಸ್ಥಾನಗಳಲ್ಲಿ ಮಾಡಲಾಗುತ್ತದೆ ಎಂದು ಅಪಪ್ರಚಾರದಲ್ಲಿ ತೊಡಗಿರುವವರು ಪ್ರಚಾರಕ್ಕಾಗಿ ಕೇವಲ ಸಲಹೆ ನೀಡಿದರೆ ಸಾಲದು, ಬದಲಾಗಿ ಸಮ್ಮೇಳನ ನಡೆಸಲು ಆರ್ಥಿಕ ಸಂಪನ್ಮೂಲವನ್ನು ದೊರಕಿಸಿಕೊಡಲಿ, ಆಗ ಬೇಕಾದರೆ ಸ್ಮಶಾನದಲ್ಲೂ ಸಮ್ಮೇಳನ ಮಾಡಲು ಸಿದ್ಧ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಅವರು ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಮುಲ್ಕಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಕಥೆ-ಕವನ ಎಂದಿಗೂ ಹಳೆಯದಾಗದ ಸಂಪತ್ತು. ಆದರೆ, ಯುವ ಸಮೂಹ ಸಾಹಿತ್ಯಾಸಕ್ತಿ ಹೆಚ್ಚಿಸಿಕೊಂಡು ಅದರ ಸದುಪಯೋಗಕ್ಕೆ ಆಸಕ್ತಿ ವಹಿಸಬೇಕು ಎಂದು ಅವರು ಹೇಳಿದರು.
ಸಮ್ಮೇಳನದ ಅಧ್ಯಕ್ಷೆ ಡಾ.ಶೈಲಜಾ ಏತಡ್ಕ ಮಾತನಾಡಿ, ಕನ್ನಡ ಭಾಷೆಯಿಂದ ಸಮಾಜ ಬೆಳೆದು ಅದರಂತೆ ಪರಂಪರೆಯನ್ನು ಬೆಳೆಸಿದ ಭಾಷೆ. ಸಾಹಿತ್ಯದ ಮೊದಲ ಭಾಷೆ ಕನ್ನಡ ಮಾತ್ರ. ಯುವ ಮನಸ್ಸುಗಳಲ್ಲಿ ಕನ್ನಡಾಭಿಮಾನ ಸಾಹಿತ್ಯದ ಮೂಲಕ ಅರಳಿಸಬೇಕಾದ ಆವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದರು.
ಖಾಲಿ ಖಾಲಿ ಕುರ್ಚಿಗಳು:
ಸಮ್ಮೇಳನದುದ್ದಕ್ಕೂ ಸಭಿಕರು ಇಲ್ಲದೆ, ಖಾಲಿ ಕುರ್ಚಿಗಳು ರಾರಾಜಿಸುತ್ತಿದ್ದವು. ಸಮ್ಮೇಳನದಲ್ಲಿ ಗೋಷ್ಠಿ, ಕವನ ವಾಚನಕ್ಕೆ ಬಂದಿದ್ದ ಕವಿಗಳ ಹೊರತು ಪಡಿಸಿ ಬೆರಳೆಣಿಕೆಯ ಕನ್ನಡಾಸಕ್ತರು ಮಾತ್ರ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು. ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಶಮೀನಾ ಆಳ್ವ, ಪ್ರಾಂಶುಪಾಲ ಪ್ರೊ.ನಾರಾಯಣ ಪೂಜಾರಿ, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮುಲ್ಕಿ ಚರ್ಚ್‌ನ ಧರ್ಮಗುರು ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ಸ್, ಕಾರ್ನಾಡು ಮಸೀದಿಯ ಎಂ.ಎಸ್.ಹೈದರಲಿ, ಮುಲ್ಕಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಹೋಬಳಿಯ ಮಾಜಿ ಅಧ್ಯಕ್ಷ ಎಂ.ಸರ್ವೊತ್ತಮ ಅಂಚನ್, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತಿತರರಿದ್ದರು.
ಹೋಬಳಿ ಸಂಚಾಲಕ ಎನ್.ಪಿ.ಶೆಟ್ಟಿ ಸ್ವಾಗತಿಸಿ, ಸಾಲ್ಯಾನ್ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.
ಆಮಂತ್ರಣ ಇಲ್ಲ
ಜ.5ರಂದು ಮುಲ್ಕಿಯ ವಿಜಯಾ ಕಾಲೇಜು ಸಭಾಂಗಣದಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಹೋಬಳಿ ಮಟ್ಟದ ಸದಸ್ಯರನ್ನು ಆಮಂತ್ರಿಸಿಲ್ಲ ಎಂದು ಎಂದು ಹೆಸರು ಹೇಳಲಿಚ್ಚಿಸದ ಮುಲ್ಕಿ ಕಸಾಪ ಸದಸ್ಯರೊಬ್ಬರು ದೂರಿದ್ದಾರೆ.
ಸ್ವಯಂ ಪ್ರಶಂಸೆಗೆ ಸೀಮಿತವಾದ ಭಾಷಣ
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಹೆಚ್ಚಿನ ಗಣ್ಯರು ಮಾತನಾಡುತ್ತಾ, ಕನ್ನಡ ಭಾಷೆ, ಸಾಹಿತ್ಯ, ಪರಂಪರೆಗಳ ಅಳಿವು- ಉಳಿವುಗಳ ಬಗ್ಗೆ ಮಾತನಾಡುವ ಬದಲು ತಮ್ಮ ಮಾತುಗಳ ಉದ್ದಕ್ಕೂ ಸ್ವಯಂ ಪ್ರಶಂಸೆಗೆ ಮೀಸಲಿಟ್ಟಿದ್ದುದು ನೆರೆದವರಿಗೆ ಮುಜುಗರವನ್ನುಂಟು ಮಾಡಿತೆನ್ನಲಾಗಿದೆ.