ಬೇಡಿಕೆ ಈಡೇರಿಕೆಗೆ ಒತ್ತಾಯ : ಎಂಡೋ ಸಂತ್ರಸ್ಥರ ಹೋರಾಟ ರಾಜಧಾನಿಗೆ
ಕಾಸರಗೋಡು ,ಜ.6 : ಎಂಡೋಸಲ್ಫಾನ್ ಸಂತ್ರಸ್ಥರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.
ಸಂತ್ರಸ್ಥರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಿಲ್ಲ ಎಂದು ಆರೋಪಿಸಿ , ಜನವರಿ 30 ರಂದು ಬೆಳಿಗ್ಗೆ 10ಗಂಟೆಗೆ ಎಂಡೋಸಲ್ಫಾನ ಸಂತ್ರಸ್ತರು ಮತ್ತು ಕುಟುಂಬಸ್ಥರು ತಿರುವನಂತಪುರದ ರಾಜಭವನ ಮುಂಭಾಗದಲ್ಲಿ ಜಾಥಾ ಮತ್ತು ಸತ್ಯಾಗ್ರಹ ನಡೆಸುವ ಮೂಲಕ ಮತ್ತೆ ಹೋರಾಟಕ್ಕಿಳಿಯಲಿದ್ದಾರೆ.
ಹೋರಾಟವನ್ನು ರಾಜಧಾನಿ ತಿರುವನಂತಪುರಕ್ಕೆ ವಿಸ್ತರಿಸಲು ತೀರ್ಮಾನಿಸಿದ್ದು , ರಾಜಭವನ್ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಿದ್ದಾರೆ.
ಸಂತ್ರಸ್ಥರಿಗೆ ಲಭಿಸಬೇಕಾದ ಸವಲತ್ತು ಗಳು ಕೈ ತಪ್ಪಿ ಹೋಗುತ್ತಿದ್ದು , ಅಧಿಕಾರಿಗಳು ಈ ನಿಟ್ಟಿನಲ್ಲಿ ವಿಫಲಗೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಸಂತ್ರಸ್ಥರು ಹಲವು ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ ಎಂಟು ತಿಂಗಳು ಕಳೆದರೂ ಬೇಡಿಕೆ ಈಡೇರಿಸಲು ಸರಕಾರ ಮುತುವರ್ಜಿ ವಹಿಸುತ್ತಿಲ್ಲ ಎಂದು ಸಂತ್ರಸ್ಥರ ಆರೋಪವಾಗಿದೆ.
ಚಿಕಿತ್ಸಾ ವೆಚ್ಚ ಮತ್ತು ಸವಲತ್ತು ಮೊಟಕುಗೊಂಡ ಹಿನ್ನಲೆಯಲ್ಲಿ ನವಂಬರ್ ತಿಂಗಳಲ್ಲಿ ಇಬ್ಬರು ಸಂತ್ರಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾಲ ಮಾಡಿ ಚಿಕಿತ್ಸಾ ವೆಚ್ಚ ಭರಿಸಿದ್ದರು. ಆದರೆ ಸರಕಾರದಿಂದ ಅನುದಾನ ಲಭಿಸದ ಹಿನ್ನಲೆಯಲ್ಲಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು.
ಸಂತ್ರಸ್ಥರಿಗೆ ಲಭಿಸಬೇಕಾದ ಸವಲತ್ತು ಲಭಿಸುತ್ತಿಲ್ಲ. ಎಂಡೋಸಲ್ಫಾನ್ ಸಂತ್ರಸ್ತರನ್ನು ಪಾಲನೆ ಮಾಡುವವರಿಗೆ ಆಶಾಕಿರಣ್ ಎಂಬ ಯೋಜನೆಯಡಿ ಮಾಶಾಸನ ಲಭಿಸುತ್ತಿತ್ತು . ಆದರೆ ಈಗಲಭಿಸದ ಸ್ಥಿತಿ ಉಂಟಾಗಿದೆ.
ಇದು ಮಾತ್ರವಲ್ಲ ಉಚಿತ ಪಡಿತರ ಸಾಮಾಗ್ರಿ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಲಭಿಸುತ್ತಿಲ್ಲ . ಹೊಸ ಪಡಿತರ ಚೀಟಿಯ ಗೊಂದಲ ಇದಕ್ಕೆ ಕಾರಣವಾಗಿದ್ದು , ಇದರಿಂದ ಎಲ್ಲಾ ಸಂತ್ರಸ್ತರನ್ನು ಬಿಪಿಎಲ್ ( ಆದ್ಯತಾ ) ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸಂತ್ರಸ್ಥರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ 3054 ಮಂದಿ ಎಂಡೋ ಸಂತ್ರಸ್ಥರಿದ್ದು , ಪಡಿತರ ಚೀಟಿ ನವೀಕರಣ ಸಂದರ್ಭದಲ್ಲಿ ಎಪಿಎಲ್ ಪಡಿತರ ಚೀಟಿದಾರರು ಎ ಪಿ ಎಲ್ ಪಟ್ಟಿಗೆ ಸೇರ್ಪಡೆಗೊಳ್ಳುವಂತಾಗಿದೆ.
ಇದರಿಂದ ಹಲವಾರು ಸವಲತ್ತುಗಳಿಂದ ಸಂತ್ರಸ್ಥರು ವಂಚಿತರಾಗುತ್ತಿದ್ದು, ಹೋರಾಟವನ್ನು ರಾಜಧಾನಿಗೆ ವಿಸ್ತರಿಸಲು ತೀರ್ಮಾನಿಸಿದ್ದಾರೆ .
ಎಂಡೋ ಸೆಲ್ ಮರು ಅಸ್ತಿತ್ವಕ್ಕೆ
ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಎಂಡೋಸಲ್ಫಾನ್ ಸೆಲ್ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ಮರುಜೀವ ಪಡೆದಿದೆ. ಜಿಲ್ಲಾಧಿಕಾರಿ ಕೆ . ಜೀವನ್ ಬಾಬು ಸೆಲ್ನ ಸಂಚಾಲಕರಾಗಿದ್ದಾರೆ.
ಎಂ . ರಾಜಗೋಪಾಲ್, ಪಿ . ಬಿ ಅಬ್ದುಕ್ ರಜಾಕ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ . ಜಿ ಸಿ ಬಷೀರ್ , ಬದಿಯಡ್ಕ , ಬೆಳ್ಳೂರು , ಎಣ್ಮಕಜೆ , ಕಾರಡ್ಕ , ಮುಳಿಯಾರ್ , ಕುಂಬ್ಡಾಜೆ, ಅಜನೂರು , ಕಲ್ಲಾರೆ , ಪನತ್ತಡಿ , ಕಯ್ಯೂರು - ಚಿಮೇನಿ, ಪುಲ್ಲೂರು - ಪೆರಿಯ ಮೊದಲಾದ ಎಂಡೋ ಸಂತ್ರಸ್ಥ ವಲಯದ ಅಧ್ಯಕ್ಷರು, ಮಾಜಿ ಶಾಸಕರಾದ ಚೆರ್ಕಳಂ ಅಬ್ದುಲ್ಲ, ಸಿ . ಟಿ ಆಹಮ್ಮದಾಲಿ , ಸಿ. ಎಚ್ ಕುಞ೦ಬು, ಹೆಚ್ಚುವರಿ ದಂಡಾಧಿಕಾರಿ ಸೆಲ್ ಸದಸ್ಯರಾಗಿದ್ದಾರೆ.