ಅಂತರ್ ಕಾಲೇಜು ನಾಟಕ -ಜಾನಪದ ನೃತ್ಯ ಸ್ಪರ್ಧೆ
ಉಡುಪಿ, ಜ.6: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ರಂಗಾಯಣ ಮೈಸೂರು ನೇತೃತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ನಾಟಕ ಸ್ಪರ್ಧೆಯ ಸ್ಪರ್ಧೆ ವಿಭಾಗದಲ್ಲಿ ಹಂಗಾರಕಟ್ಟೆ ಬಿ.ಡಿ.ಶೆಟ್ಟಿ ಕಾಲೇಜಿನ ‘ಮದುವೆ ಹೆಣ್ಣು’ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಶ್ರೀಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ‘ಹೌಂದರಾಯನ ಓಲ್ಗ’ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿವೆ.
ನಾಟಕ ವಿಭಾಗದಲ್ಲಿ ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ‘ಸೇವಂತಿ ಪ್ರಸಂಗ’ ದ್ವಿತೀಯ ಹಾಗೂ ಜಾನಪದ ವಿಭಾಗದಲ್ಲಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಸಾಳೆ, ಕಂಗೀಲು ನೃತ್ಯ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಆಯ್ಕೆಯಾದ ಎಲ್ಲ ಕಾಲೇಜುಗಳು ಜ.9 ರಂದು ಮೈಸೂರಿನ ರಂಗಾಯಣದಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆ ಯಲ್ಲಿ ಪ್ರರ್ಶನ ನೀಡಲಿವೆ.
ಸ್ಪರ್ಧೆಯ ನಿರ್ಣಾಯಕರಾಗಿದ್ದ ಮಂಗಳೂರಿನ ಚಂದ್ರಹಾಸ್ ಉಳ್ಳಾಲ್, ಲಕ್ಷ್ಮಣ್ ಕುಮಾರ್ ಮಲ್ಲೂರು ಹಾಗೂ ಉಡುಪಿಯ ಯಾದವ್ ಕರ್ಕೇರ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಪ್ರಶಸ್ತಿ ವಿಜೇತ ನಗದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿ ಪೂರ್ಣಿಮಾ ಹಾಗೂ ಹಿರಿಯ ರಂಗ ನಟ ಎಂ.ಎಸ್.ಭಟ್ ವಿತರಿಸಿದರು.
ಸ್ಪರ್ಧಾ ಸಮಿತಿಯ ಜಿಲ್ಲಾ ಸಂಚಾಲಕ ಪ್ರವೀಣ್ ಜಿ.ಕೊಡವೂರು ವಂದಿಸಿದರು.
ಉಡುಪಿ ಜಿಲ್ಲೆಯ 10 ಕಾಲೇಜುಗಳು ಸ್ಪರ್ಧೆಯ ಎರಡು ವಿಭಾಗಗಳಲ್ಲಿ ಭಾಗವಹಿಸಿದ್ದವು.