ಅನ್ಯಾಯದ ವಿರುದ್ಧ ಸರ್ವಧರ್ಮೀಯರ ಧರ್ಮಯುದ್ಧ: ಡಾ.ಭಂಡಾರಿ

Update: 2017-01-06 15:10 GMT

ಉಡುಪಿ, ಜ.6: ಉಡುಪಿಯ ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಹಣ ಇಲ್ಲದವರ ಕೈಯಿಂದ ಕಿತ್ತು ಹಣವಂತರಿಗೆ ನೀಡುವ ಮೋಸ ಹಾಗೂ ಅನ್ಯಾಯದ ವಿರುದ್ಧ ಸರ್ವಧರ್ಮೀಯರು ನಡೆಸುತ್ತಿರುವ ಧರ್ಮಯುದ್ಧ ಇದಾಗಿದೆ ಎಂದು ಆಸ್ಪತ್ರೆಯ ಉಳಿವಿಗಾಗಿ ನಾಗರಿಕರ ಒಕ್ಕೂಟದ ಸಂಚಾಲಕ, ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಹಾಗೂ ಮಕ್ಕಳ ಆಸ್ಪತ್ರೆಯನ್ನು ಖಾಸಗಿ ಉದ್ಯಮಿಗೆ ವಹಿಸುವ ಸರಕಾರದ ಕ್ರಮ ವಿರೋಧಿಸಿ ಉಡುಪಿಯ ಸರಕಾರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಉಳಿವಿಗಾಗಿ ನಾಗರಿಕರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಜೋಡುಕಟ್ಟೆಯಿಂದ ಚಿತ್ತರಂಜನ್ ಸರ್ಕಲ್‌ವರೆಗೆ ರ‍್ಯಾಲಿ ಹಾಗೂ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಖಾಸಗೀಕರಣದ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ನ್ಯಾಯಾಂಗ ಹೋರಾಟ ಮಾಡಲಾಗುವುದು. ಇದರಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಖಾಸಗಿಯವರಿಗೆ ವಹಿಸಿಕೊಡುವ ವಿಶ್ವೇಶ್ವರಯ್ಯ ವಾಣಿಜ್ಯ ಕಟ್ಟಡಕ್ಕೆ 200 ಪುಟಗಳ ಒಪ್ಪಂದ ಪತ್ರವನ್ನು ತಯಾರಿಸಿದರೆ, 600ಬೆಡ್‌ನ ಆಸ್ಪತ್ರೆ ನಿರ್ಮಿಸಲು ಕೇವಲ 25ಪುಟದ ಒಪ್ಪಂದ ಪತ್ರವನ್ನು ರಚಿಸಲಾಗಿದೆ. ಹಾಜಿ ಅಬ್ದುಲ್ಲ ಸಾಹೇಬರು 1930ರಲ್ಲಿ 10ರೂ.ಗೆ ಸರಕಾರಕ್ಕೆ ದಾನವಾಗಿ ನೀಡಿರುವ ಜಾಗವನ್ನು ಇದೀಗ ಖಾಸಗಿಯವರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಈ ಆಸ್ಪತ್ರೆಯನ್ನು ಲಾಭ ನಷ್ಟಕ್ಕಿಂತ ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಇದೀಗ ಸರಕಾರ ಈ ಆಸ್ಪತ್ರೆಯನ್ನು ಬಡವರ ಕೈಯಿಂದ ಕಿತ್ತು ಶ್ರೀಮಂತರ ಕೈಗೆ ನೀಡುವ ಮೂಲಕ ಹಣದ ಮುಂದೆ ಮಾನವೀಯತೆ ಯನ್ನು ಸೋಲಿಸಲು ಹೊರಟಿದೆ ಎಂದು ಟೀಕಿಸಿದರು.

ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಈ ಆಸ್ಪತ್ರೆಯನ್ನು ಖಾಸಗಿಯವರು ನಿರ್ಮಿಸಿ ಸರಕಾರಕ್ಕೆ ನೀಡುವುದಾದರೆ ನಮ್ಮ ವಿರೋಧವಿಲ್ಲ. ಅದರ ಬದಲಾಗಿ ಒಬ್ಬ ವ್ಯಕ್ತಿಯ ಕೈಗೆ ನೀಡಬಾರದು. ಹಾಜಿ ಅಬ್ದುಲ್ಲಾ ದಾನವಾಗಿ ನೀಡಿರುವ ಆಸ್ತಿಯನ್ನು ಉಳಿಸುವಂತಹ ಕೃತಜ್ಞತೆ ಸರಕಾರಕ್ಕೆ ಇಲ್ಲವಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಚಿಂತಕ ಕೆ.ಫಣಿರಾಜ್ ಮಾತನಾಡಿ, ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 3000 ಮಂದಿ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಪ್ರತಿ ವರ್ಷ ಎ ಗ್ರೇಡ್ ಸ್ಥಾನವನ್ನು ಕಾಪಾಡಿಕೊಂಡು ಬರುತ್ತಿರುವ ಈ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯ ಸಾವು ಸಂಭವಿಸುತ್ತಿರುವುದು ಇಡೀ ರಾಜ್ಯದಲ್ಲೇ ಅತಿ ಕಡಿಮೆ ಎಂದರು.

ಎಸ್‌ಡಿಪಿಐಯ ಅಬ್ದುರ್ರಹ್ಮಾನ್ ಮಲ್ಪೆ, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಪಿಎಫ್‌ಐಯ ಆಲಂ ಬ್ರಹ್ಮಾವರ, ಸಿಐಟಿಯು ಮುಖಂಡ ಕವಿರಾಜ್, ಸಿಪಿಐ ಮುಖಂಡ ಕೆ.ವಿ.ಭಟ್, ದಸಂಸ ಮುಖಂಡ ರಾದ ಸುಂದರ್ ಮಾಸ್ಟರ್, ಶ್ಯಾಮ್‌ರಾಜ್ ಬಿರ್ತಿ,  ನಝೀರ್ ಉಡುಪಿ, ಎಸ್‌ಐಓನ ಯಾಸೀನ್ ಕೋಡಿಬೆಂಗ್ರೆ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಅಕ್ಬರ್ ಅಲಿ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹ್ಮದ್,  ಅಲ್ಪಸಂಖ್ಯಾತರ ವೇದಿಕೆಯ ಜಿಲ್ಲಾಧ್ಯಕ್ಷ ಖಲೀಲ್ ಅಹ್ಮದ್, ಮುಸ್ಲಿಮ್ ಒಕ್ಕೂಟದ ಅಬ್ದುಲ್ಲಾ ಪರ್ಕಳ, ಎಂ.ಪಿ. ಮೊದಿನಬ್ಬ, ಹುಸೇನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಾನಿ ಹಾಜಿ ಅಬ್ದುಲ್ಲಾರ ಸಂಬಂಧಿ ಖುರ್ಷಿದ್ ಅಹ್ಮದ್ ಹಾಜಿ ಅಬ್ದುಲ್ಲರ ಕುರಿತು ಪ್ರೊ.ಮುರಳಿಧರ ಉಪಾಧ್ಯಾಯ ಬರೆದ ಪುಸ್ತಕ ಮರುಮುದ್ರಣವನ್ನು ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ಜೋಡುಕಟ್ಟೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಗೆ ಮೀನಾಕ್ಷಿ ಭಂಡಾರಿ ಚಾಲನೆ ನೀಡಿದರು. ಜಿಲ್ಲಾ ನಾಗರಿಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರ ಟ್ಯಾಬ್ಲೋ ಗಮನ ಸೆಳೆಯಿತು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್.ಶೆಟ್ಟಿ ನಿರ್ಮಿ ಸುವುದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ಆಸ್ಪತ್ರೆ ನಿರ್ಮಿಸಿದ ಬಳಿಕ ಮುಂದೆ ಅದರ ಜವಾಬ್ದಾರಿಯನ್ನು ಸರಕಾರಕ್ಕೆ ಒಪ್ಪಿಸಬೇಕು. ಆಸ್ಪತ್ರೆಯ ರಕ್ಷ ಸಮಿತಿಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳಿಗೆ ನೀಡದೆ ಜಿಲ್ಲಾ ಸರ್ಜನ್‌ಗೆ ವಹಿಸಬೇಕು. 400 ಬೆಡ್‌ನ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಶುಲ್ಕವನ್ನು ಇತರ ಸರಕಾರಿ ಆಸ್ಪತ್ರೆಯಷ್ಟೆ ಭರಿಸಬೇಕು. ಆಸ್ಪತ್ರೆಯ ಒಪ್ಪಂದ ಪತ್ರವನ್ನು ಸಾರ್ವಜನಿಕರಿಗೆ ಕೂಡಲೇ ನೀಡಬೇಕು ಮತ್ತು ಇಂಟರ್‌ನೆಟ್‌ನಲ್ಲಿ ಪ್ರಕಟಿಸಬೇಕು ಎಂದು ಡಾ.ಪಿ.ವಿ. ಭಂಡಾರಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News