ಕ್ಯಾಥೊಲಿಕ್ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮೂಲ ಕಾರಣ- ವಿನಯಕುಮಾರ್ ಸೊರಕೆ

Update: 2017-01-06 14:44 GMT

ಪುತ್ತೂರು, ಜ.6 : ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಕ್ಯಾಥೊಲಿಕ್ ಸಂಸ್ಥೆಯ ಪಾತ್ರ ಮಹತ್ತರವಾಗಿದ್ದು, ಸೇವೆಯ ರೂಪದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕ್ಯಾಥೊಲಿಕ್ ಸಂಸ್ಥೆಗಳು ಇಂದಿನ ಶೈಕ್ಷಣಿಕ ಕ್ರಾಂತಿಗೆ ಮೂಲಕ ಕಾರಣವಾಗಿದೆ ಎಂದು ಮಾಜಿ ನಗರಾಭಿವೃದ್ಧಿ ಸಚಿವ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಶುಕ್ರವಾರ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ,  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರೆ ಅದರ ಹಿಂದೆ ಶತಮಾನದ ಹಿಂದೆ ಶಿಕ್ಷಣದ ಬೀಜ ಬಿತ್ತಿದ ಕ್ಯಾಥೊಲಿಕ್ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದರು.

ಶಾಲೆಯ ನೂತನ ಕಟ್ಟಡದ ಆರ್ಥಿಕ ಸಮಿತಿಯ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಮುಂದೆಯೂ ಇಲ್ಲಿಗೆ ಆರ್ಥಿಕ ಸಹಾಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ದಾನಿಗಳಿಗೆ ಇನ್ನೂ ಅವಕಾಶವಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ,  ಅಂಕ ಸಂಪಾದಿಸುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಮುಖ್ಯವಾದುದು ಜೀವನ ಮೌಲ್ಯ ಸಂಪಾದನೆ. ಬದುಕಿನಲ್ಲಿ ಶಿಸ್ತು, ಸಂಯೋಜನೆ ಮುಖ್ಯ. ಇದನ್ನು ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾದುದು ಎಂದರು.

ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಅಲೋಷಿಯಸ್ ಪಾವ್ಲ್ ಡಿ’ಸೋಜ ನೂತನ ಕಟ್ಟಡವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿ’ಸೋಜ ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಶುಭ ಹಾರೈಸಿದರು.

  ಈ ಸಂದರ್ಭದಲ್ಲಿ ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಅಲೋಷಿಯಸ್ ಪಾವ್ಲ್ ಡಿ’ಸೋಜ, ನೂತನ ಕಟ್ಟಡದ ಆರ್ಥಿಕ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಕಟ್ಟಡಕ್ಕೆ ಅನುದಾನ ಒದಗಿಸಿದ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಉದ್ಯಮಿ ಮೈಕೆಲ್ ಡಿ’ಸೋಜ, ಶಾಲೆಯ ಸಿಬ್ಬಂದಿ ಜೋಸ್ಸಿ ಮಸ್ಕರೇನಸ್, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ನೀಲ್ ಮಸ್ಕರೇನಸ್, ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಜೆರಾಲ್ಡ್ ಡಿ’ಸೋಜ, ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಡಾ. ಸೂರ್ಯ ನಾರಾಯಣ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್. ಕೆ. ಜಗನ್ನಿವಾಸ ರಾವ್ ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷೆ ವಿಜಯ ಸರಸ್ವತಿ, ಶಾಲಾ ವಿದ್ಯಾರ್ಥಿ ನಾಯಕ ಜೈಕಿಶನ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಓಸ್ವಾಲ್ಡ್ ರೋಡ್ರಿಗಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಮಾದೆ ದೇವುಸ್ ಚರ್ಚ್‌ನ ಧರ್ಮಗುರುಗಳಾದ ಶಿಕ್ಷಣ ಸಂಸ್ಥೆಯ ಸಂಚಾಲಕ ಅಲ್ಫ್ರೆಡ್ ಜೆ. ಪಿಂಟೋ ಸ್ವಾಗತಿಸಿದರು. ಶಿಕ್ಷಕರಾದ ಶಾಂತಾ ಕುಮಾರಿ ವಂದಿಸಿದರು. ರಾಜಶೇಖರ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News