ಹಿಜಾಬ್‌ಧಾರಿ ಮಹಿಳೆ, ಸಂಬಂಧಿಗಳನ್ನು ‘ಭಯೋತ್ಪಾದಕರ ಗುಂಪು’ ಎಂದ ದುಷ್ಕರ್ಮಿ
ಹೂಸ್ಟನ್, ಜ. 6: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯ ಗಳಿಸಿದ ಬಳಿಕ, ಹಿಜಾಬ್ ಧರಿಸುವ ಮಹಿಳೆಯರ ಮೇಲೆ ಆರಂಭವಾದ ದಾಳಿ ಸರಣಿ ಮುಂದುವರಿದಿದೆ.
ಹೊಸ ಘಟನೆಯಲ್ಲಿ, ಹೂಸ್ಟನ್‌ನ ಜನನಿಬಿಡ ಚೌಕವೊಂದರಲ್ಲಿ ಶಿರವಸ್ತ್ರ ಧರಿಸಿದ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರನ್ನು ದುಷ್ಕರ್ಮಿಯೊಬ್ಬ ‘ಭಯೋತ್ಪಾದಕರ ಗುಂಪು’ ಎಂಬುದಾಗಿ ಕರೆದು ಹೀಗಳೆದಿದ್ದಾರೆ.
21 ವರ್ಷದ ಶಿಫಾ ಅಬುಝಾಯಿದ್ ಮತ್ತು ಅವರ ಸಹೋದರ ಸಂಬಂಧಿಗಳು ಶನಿವಾರ ಟೆಕ್ಸಾಸ್‌ನ ಶುಗರ್ ಲ್ಯಾಂಡ್ ಟೌನ್ ಚೌಕದಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಅವರನ್ನು ‘ಭಯೋತ್ಪಾದಕರ ಗುಂಪು’ ಎಂಬುದಾಗಿ ಕರೆದನು. ಈ ಬಗ್ಗೆ ಶಿಫಾ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದಾರೆ.
ಈ ಘಟನೆಯು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ತಕ್ಷಣ ಅವರ ಸಂದೇಶವನ್ನು 2,500ಕ್ಕೂ ಅಧಿಕ ಬಾರಿ ಶೇರ್ ಮಾಡಲಾಗಿದೆ.
ಅಬುಝಾಯಿದ್ ಮತ್ತು ಅವರ ಕುಟುಂಬ ಸದಸ್ಯರು ಹೊಟೇಲೊಂದರಲ್ಲಿ ಊಟ ಮಾಡಿ ತಮ್ಮ ಕಾರಿನ ಕಡೆಗೆ ನಡೆಯುತ್ತಿದ್ದರು. ಆಗ ಅವರು ಕೆಟ್ಟ ಮಾತುಗಳನ್ನು ಆಡುತ್ತಿದ್ದ ಓರ್ವ ಪುರುಷ ಮತ್ತು ಮಹಿಳೆಯನ್ನು ಹಾದು ಹೋದರು.
ಆ ವ್ಯಕ್ತಿ ತಮ್ಮನ್ನು ಭಯೋತ್ಪಾದಕರು ಎಂಬುದಾಗಿ ಕರೆದರು ಎಂಬುದನ್ನು ಶಿಫಾ ಜೊತೆಗಿದ್ದ ಮಕ್ಕಳು ಅವರ ಗಮನಕ್ಕೆ ತಂದರು. ಇದರಿಂದ ಆಘಾತಗೊಂಡ ಶಿಫಾ ಈ ಬಗ್ಗೆ ಆ ವ್ಯಕ್ತಿಯನ್ನು ಪ್ರಶ್ನಿಸಲು ಮುಂದಾದರು.
ಆ ವ್ಯಕ್ತಿ ಅಂಗಡಿಯೊಂದಕ್ಕೆ ಹೋದಾಗ ಶಿಫಾ ಮತ್ತು ಅವರ ಜೊತೆಗಿದ್ದ ಮಕ್ಕಳೂ ಅಲ್ಲಿಗೆ ಹೋದರು. ‘‘ನೀವು ನಮ್ಮನ್ನು ಯಾಕೆ ಭಯೋತ್ಪಾದಕರು ಎಂದು ಕರೆದಿರಿ?’ ಎಂದು ಶಿಫಾ ನಯವಾಗಿ ಆ ವ್ಯಕ್ತಿಯನ್ನು ಪ್ರಶ್ನಿಸಿದರು.
ಆಗ ಆ ವ್ಯಕ್ತಿ ಜಗಳಕ್ಕೆ ನಿಂತನು. ಆತನು ಶಿಫಾರ ಸಮೀಪ ಬಂದಾಗ ಶಿಫಾರ ತಂಗಿ ಅಳಲು ಆರಂಭಿಸಿದರು. ಆಗ ಅವರ 15 ವರ್ಷದ ಸಹೋದರ ಅವರ ನಡುವೆ ಬಂದನು. ಬಾಲಕನನ್ನು ಆ ವ್ಯಕ್ತಿ ದೂಡಿದನು ಎಂದು ಶಿಫಾ ಆರೋಪಿಸಿದ್ದಾರೆ.
ಬಳಿಕ, ತಾನು ಹಾಗೆ ಹೇಳಿಲ್ಲ ಎಂಬುದಾಗಿ ಆ ವ್ಯಕ್ತಿ ಹೇಳಿದನು. ಅಂಗಡಿಯ ಮ್ಯಾನೇಜರ್ ಒಬ್ಬನು ತಮ್ಮ ಸಹಾಯಕ್ಕೆ ಬಂದನು ಎಂದು ಶಿಫಾ ಹೇಳಿದ್ದಾರೆ. ಅಂಗಡಿಯವರು ಭದ್ರತಾ ಸಿಬ್ಬಂದಿಯನ್ನು ಕರೆದರು. ಆಗ ಆ ವ್ಯಕ್ತಿ ಮತ್ತು ಮಹಿಳೆ ಅಲ್ಲಿಂದ ಹೋದರು.