ಆತಂಕಕ್ಕೆ ಕಾರಣವಾಯಿತು ಪಾರ್ಸೆಲ್ ಪೆಟ್ಟಿಗೆ
ಪುತ್ತೂರು, ಜ.6 : ಅಂಗಡಿಯೊಂದರ ಪಕ್ಕ ತಂದಿರಿಸಿದ್ದ ಪಾರ್ಸೆಲ್ ಬಾಕ್ಸೊಂದು ಆತಂಕ ಸೃಷ್ಠಿಸಿದ ಘಟನೆ ಶುಕ್ರವಾರ ಪುತ್ತೂರು ನಗರದ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿ ಸಂಭವಿಸಿದೆ.
ರಟ್ಟಿನ ಪೆಟ್ಟಿಗೆಗೆ ಬಿಳಿ ಪ್ಲಾಸ್ಟಿಕ್ ಕವರ್ ಅಳವಡಿಸಿ ಪ್ಯಾಕ್ ಮಾಡಿ ಗುರುವಾರ ರಾತ್ರಿ ವೇಳೆ ಪುತ್ತೂರಿನ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿನ ಶಿವ ಇಲೆಕ್ಟ್ರಿಕಲ್ಸ್ ಅಂಗಡಿಯ ಎದುರು ತಂದಿರಿಸಿದ್ದರು. ಮಮೂಲಿನಂತೆ ಶುಕ್ರವಾರ ಬೆಳಿಗ್ಗೆ ಶಿವ ಇಲೆಕ್ಟ್ರಿಕಲ್ಸ್ ಅಂಗಡಿಗೆ ಪಾರ್ಸೆಲ್ ತಂದ ಯುವಕರು ಅಂಗಡಿಯ ಪಕ್ಕ ರಸ್ತೆಯಲ್ಲಿದ್ದ ಆ ಬಾಕ್ಸ್‌ನ್ನು ಅಂಗಡಿಗೆ ತಂದಿಟ್ಟ ಪಾರ್ಸೆಲ್ ಆಗಿರಬಹುದು ಎಂದು ಭ್ರಮಿಸಿ ತಾವು ತಂದಿದ್ದ ಪಾರ್ಸೆಲ್ ಬಾಕ್ಸ್‌ಗಳ ಜೊತೆಗೆ ಅಂಗಡಿಯ ಜಗಲಿಯಲ್ಲಿ ಇಟ್ಟು ಹೋಗಿದ್ದರು .ಈ ಬಾಕ್ಸ್ ಆತಂಕ ಸೃಷ್ಠಿಗೆ ಕಾರಣವಾಯಿತು.
ಶಿವ ಇಲೆಕ್ಟ್ರಿಕಲ್ಸ್ ಮಾಲಕ ರಮೇಶ್ ಅವರು ಶುಕ್ರವಾರ ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಪಾರ್ಸೆಲ್ ಬಾಕ್ಸ್‌ಗಳನ್ನು ಪರಿಶೀಲಿಸಿದ ವೇಳೆ ರಟ್ಟಿನ ಪೆಟ್ಟಿಗೆಯಲ್ಲಿದ್ದ ಪಾರ್ಸೆಲ್‌ನಿಂದ ದುರ್ವಾಸನೆ ಬರತೊಡಗಿತ್ತು. ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ಆತಂಕಿತರಾದ ಅವರು ಪುತ್ತೂರು ನಗರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಕೂಡಲೇ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಟ್ಟಿನ ಪೆಟ್ಟಿಗೆಯನ್ನು ಬಿಡಿಸಿ ನೋಡಿದಾಗ ಅದರೊಳಗೆ 4 ಸತ್ತ ಹೆಗ್ಗಣಗಳು ಕಂಡು ಬಂದಿದ್ದವು ಎಂದು ತಿಳಿದು ಬಂದಿದೆ.
ಯಾರೋ ಕಿಡಿಗೇಡಿಗಳು ಆತಂಕ ಸೃಷ್ಠಿಸಲೆಂದು ಈ ಕೆಲಸ ಮಾಡಿರುವುದರಿಂದಾಗಿ ಅಂಗಡಿ ಮಾಲಕರು ಬೆಚ್ಚಿ ಬೇಳುವ ಪ್ರಮೇಯ ಬಂದಿತ್ತು. ಜೊತೆಗೆ ಪೊಲೀಸರಿಗೂ ಒಂದಿಷ್ಟು ಆತಂಕ ಪಡುವಂತಾಯಿತು.