ಎಂಡೋ ಪೀಡಿತ ಕುಟುಂಬಗಳ ಪರ ಸರ್ಕಾರ ನಿಲ್ಲಬೇಕಾಗಿದೆ : ಸಂಸದೆ ಶೋಭಾ ಕರಂದ್ಲಾಜೆ
ಬೆಳ್ತಂಗಡಿ, ಜ.6 : ರಾಜ್ಯದಲ್ಲಿನ ಎಂಡೋ ಪೀಡಿತ ಕುಟುಂಬಗಳು ತೀವ್ರತರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಕೊಕ್ಕಡದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಯ ದಾರಿಯನ್ನು ಹಿಡಿದಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಇವರ ನೆರವಿಗೆ ನಿಲ್ಲಬೇಕಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಶುಕ್ರವಾರ ಕೊಕ್ಕಡದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಗ ಶರಣಾಗಿದ್ದ ಬಾಬುಗೌಡರ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಂಡೋ ಪೀಡಿತರು ಉಚ್ಚನ್ಯಾಯಾಲಯದಲ್ಲಿ ಹೊರಾಟ ನಡೆಸಿ ಒಂದಿಷ್ಟು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಆದರೆ ಸರಕಾರ ಇನ್ನೂ ಅವರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಮನೆಯವರೆಲ್ಲರೂ ಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದರೆ ಅವರು ಅನುಭವಿಸುತ್ತಿರುವ ನೋವನ್ನು ತಿಳಿಯಬಹುದಾಗಿದೆ. ಬೆಂಗಳೂರಿನಲ್ಲಿ ಕುಳಿತು ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ . ವಾಸ್ತವವನ್ನು ತಿಳಿದು ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದರು.
ಕೊಕ್ಕಡದಲ್ಲಿ ಎಂಡೋ ಪೀಡಿತರಿಗಾಗಿ ಒಂದು ಶಾಶ್ವತ ಪುನರ್ವಸತಿ ಕೇಂದ್ರವನ್ನು ಆರಂಭಿಸುವ ಬೇಡಿಕೆ ಬಹು ಹಿಂದಿನದು . ಆದರೆ ಸರಕಾರ ಇನ್ನೂ ಇದರತ್ತ ಗಮನ ಹರಿಸಿಲ್ಲ. ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಆರಂಭಿಸಿದ್ದ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೂ ಅಗತ್ಯ ಅನುದಾನ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಇವುಗಳು ಮುಂದಿನ ಮಾರ್ಚ್ ವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ತಿಳಿದು ಬಂದಿದೆ ಸರಕಾರ ಇದರತ್ತ ಕೂಡಲೇ ಗಮನ ಹರಿಸಬೇಕು. ಹಾಗೂ ಅಗತು ಅನುದಾನ ಒದಗಿಸಬೇಕು ಎಂದು ಒತ್ತಯಿಸಿದರು.
ಎಂಡೋಸಲ್ಫಾನ್ ವಿಷಕಾರಿ ಅಂಶದಿಂದ ಇಂದಿಗೂ ನರಳುತ್ತಿರುವ ಸಂತ್ರಸ್ಥರ ಮೂಲ ಅಧ್ಯಯನವನ್ನು ಸರಿಯಾದ ರೀತಿಯಲ್ಲಿ ರಾಜ್ಯ ಸರಕಾರ ಕೈಗೊಳ್ಳಲೇಬೇಕಾಗಿದೆ. ಈ ವರೆಗೂ ಮಾಡಿರುವ ಎಂಡೋ ಸಂತ್ರಸ್ಥರ ಸಮೀಕ್ಷೆಗಳು ಕೇವಲ ಕಣ್ಣೋಟಕ್ಕೆ ಕಾಣಬಹುದಾದ ದಾಖಲೆಗಳ ಆಧಾರದಲ್ಲಿಯೇ ಮಾಡಲಾಗಿದೆ ವಿನಃ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದನ್ನೇ ಇನ್ನೂ ಮಾಡಿರುವುದಿಲ್ಲ.
ಇಂದು ಸಾಮೂಹಿಕ ಆತ್ಮಹತ್ಯೆಗೈದ ಕುಟುಂಬಕ್ಕೆ ಬಂದೊದಗಿದ್ದಂತಹ ಸಮಸ್ಯೆ ಮುಂದೆ ಯಾವ ಸಂತ್ರಸ್ಥನಿಗೂ ಬರಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಎಂಡೋ ಪೀಡಿತರಿಗೆ ಉಚಿತ ಚಿಕಿತ್ಸೆಗೆ ಕೇವಲ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ . ಅವರು ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಎಲ್ಲಾ ಅಂಶಗಳನ್ನು ಮತ್ತು ಎಂಡೋ ಸಂತ್ರಸ್ಥರ ಕುರಿತಾಗಿ ಸರಕಾರವು ಕೈಗೊಳ್ಳಲೇ ಬೇಕಾದ ಕಾರ್ಯಗಳ ಬಗ್ಗೆ ತಾನು ಸರಕಾರವನ್ನು ಮತ್ತು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ. ಈ ಸಂದರ್ಭ ಈ ಭಾಗದ ಎಂಡೋ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವಂತೆ ಕೊಕ್ಕಡದ ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಸಂಸದರಿಗೆ ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಕಾರ್ಯದರ್ಶಿ ಬ್ರಿಜೇಶ್ ಚೌಟ, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಗೌಡ , ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಕುಶಾಲಪ್ಪ ಗೌಡ ಪೂವಾಜೆ, ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ, ಶಶಿಧರ ಕಲ್ಮಂಜ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಕಾರ್ಯದರ್ಶಿ ಮಂಜುನಾಥ ಸಾಲಿಯಾನ್, ತಾಲೂಕಿನ ಪದಾಧಿಕಾರಿಗಳಾದ ಸೀತಾರಾಮ್ ಬಿ.ಎಸ್., ಭರತ್ ಕುಮಾರ್ ಮತ್ತಿತರರಿದ್ದರು.