ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಶೂಟೌಟ್: 5 ಮಂದಿ ಬಲಿ
ಫೋರ್ಟ್ ಲಾಡ್ರೆಲ್ ಫ್ಲೋರಿಡಾ, ಜ.7: ಶಂಕಿತ ವ್ಯಕ್ತಿಯೊಬ್ಬ ಫೋರ್ಟ್ ಲಾಡ್ರೆಲ್ ಫ್ಲೋರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಶೂಟೌಟ್‌ನಲ್ಲಿ ಐದು ಮಂದಿ ಮೃತಪಟ್ಟು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.
ಬ್ರೋವ್ಡ್ ಕೌಂಟಿ ಶೆರೀಫ್ ಅವರ ಕಚೇರಿ, ಶುಕ್ರವಾರ ಸಂಜೆ ನಡೆದ ಈ ಘಟನೆಯ ಮಾಹಿತಿಯನ್ನು ಟ್ವೀಟ್ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಟರ್ಮಿನಲ್-2ರಲ್ಲಿ ನಡೆದ ಅಪರಾಧ ಕೃತ್ಯದ ಬಗೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಬ್ರೋವ್ಡ್ ಕೌಂಟಿ ಮೇಯರ್ ಬರ್ಬರಾ ಶರೀಫ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ.
ಕಾನೂನು ಜಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತುರ್ತು ವೈದ್ಯಕೀಯ ಸಿಬ್ಬಂದಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ. ಹಲವು ಸಾವುಗಳು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ಬ್ರೋವ್ಡ್ ಕೌಂಟಿ ಶರೀಫ್ ಅವರ ಕಚೇರಿ ಈ ಮುನ್ನ ಟ್ವೀಟ್ ಮಾಡಿತ್ತು.
ಗವರ್ನರ್ ರಿಕ್ ಸ್ಕಾಟ್ ಅವರ ಕಚೇರಿ ಕೂಡಾ ಶೂಟೌಟ್ ದೃಢಪಡಿಸಿದೆ. ಕಾನೂನು ಜಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಗವರ್ನರ್ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡು ರಕ್ತ ಸುರಿಯುತ್ತಿರುವವರನ್ನು ತುರ್ತು ವೈದ್ಯಕೀಯ ಸೇವಾ ಸಿಬ್ಬಂದಿ ಉಪಚರಿಸುತ್ತಿರುವ ದೃಶ್ಯಾವಳಿಗಳನ್ನು ದೃಶ್ಯ ಮಾಧ್ಯಮಗಳು ಬಿತ್ತರಿಸಿವೆ. ಘಟನೆ ನಡೆದ ಸುತ್ತಮುತ್ತಲೂ ಸಾವಿರಾರು ಮಂದಿ ಗುಂಪು ಸೇರಿರುವ ದೃಶ್ಯವನ್ನು ಸುದ್ದಿ ಹೆಲಿಕಾಪ್ಟರ್‌ಗಳು ಪ್ರಸಾರ ಮಾಡಿವೆ. ಈ ಘಟನೆಗೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬರ್ಬರಾ ಶರೀಫ್ ಹೇಳಿದ್ದಾರೆ.