×
Ad

ಸಿರಿಯ, ಇರಾಕ್ ನ ನಿರಾಶ್ರಿತರಿಗೆ ಟರ್ಕಿಯ ನಾಗರಿಕತ್ವ : ಎರ್ದೊಗಾನ್

Update: 2017-01-07 12:55 IST

ಇಸ್ತಾಂಬುಲ್, ಜ.7: ಸಿರಿಯ ಹಾಗೂ ಇರಾಕ್ ದೇಶಗಳಿಂದ ಟರ್ಕಿಗೆ ಬಂದಿರುವ ಲಕ್ಷಾಂತರ ನಿರಾಶ್ರಿತರಲ್ಲಿ ಕೆಲವರಿಗೆ ಟಿರ್ಕಿಯ ನಾಗರಿಕತ್ವ ನೀಡಲಾಗುವುದು ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಫ್ ಎರ್ದೊಗಾನ್ ಹೇಳಿದ್ದಾರೆ.

ದೇಶದ ಆಂತರಿಕ ಸಚಿವಾಲಯ ಈ ಸಂಬಂಧ ಕಾರ್ಯನಿರತವಾಗಿದ್ದು, ಎಲ್ಲಾ ದಾಖಲೆಗಳ ಪರಿಶೀಲನೆ ನಂತರ ಕೆಲ ನಿರಾಶ್ರಿತರಿಗೆ ದೇಶದ ನಾಗರಿಕತ್ವ ನೀಡಲಾಗುವುದು ಎಂದು ರಾಷ್ಟ್ರೀಯ ಟೆಲಿವಿಷನ್ ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಎರ್ದೊಗಾನ್ ಹೇಳಿದ್ದಾರೆ.

‘‘ನಿರಾಶ್ರಿತರಲ್ಲಿ ಹಲವಾರು ಮಂದಿ ವೈದ್ಯರು, ಇಂಜಿನಿಯರ್ ಗಳು ಹಾಗೂ ವಕೀಲರಿದ್ದಾರೆ. ಈ ಪ್ರತಿಭೆಗಳ ಸದುಪಯೋಗ ಪಡಿಸಿಕೊಳ್ಳುವ’’ ಎಂದು ಎರ್ದೊಗಾನ್ ಹೇಳಿದ್ದಾರೆ. ಇಂತಹ ಪ್ರತಿಭಾವಂತರು ಅಲ್ಲಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯನಿರ್ವಹಿಸುವ ಬದಲು ಅವರಿಗೆ ಇಲ್ಲಿನ ನಾಗರಿಕರಾಗಿ ಇಲ್ಲಿನ ಮಕ್ಕಳಂತೆಯೇ ಅವಕಾಶಗಳನ್ನು ನೀಡೋಣ’’ ಎಂದೂ ಅವರು ತಿಳಿಸಿದ್ದಾರೆ.

ಈ ಯೋಜನೆಯನ್ನು ಸರಕಾರ ಯಾವ ಕ್ಷಣದಲ್ಲಾದರೂ ಜಾರಿಗೆ ತರಬಹುದು ಎಂದಷ್ಟೇ ಹೇಳಿದ ಎರ್ದೊಗಾನ್‌, ಒಟ್ಟು ಎಷ್ಟು ಮಂದಿ ನಿರಾಶ್ರಿತರಿಗೆ ಟರ್ಕಿ ನಾಗರಿಕತ್ವ ನೀಡಲಾಗುವುದು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಸರಕಾರಿ ಮೂಲಗಳ ಪ್ರಕಾರ ದೇಶದಲ್ಲಿ 30 ಲಕ್ಷಕ್ಕಿಂತಲೂ ಅಧಿಕ ಸಿರಿಯ ಮತ್ತು ಇರಾಕಿ ನಿರಾಶ್ರಿತರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News