×
Ad

‘ಟ್ರೀ ಮ್ಯಾನ್’ ಗೆ ಮರುಜನ್ಮ ನೀಡಿದ 16 ಶಸ್ತ್ರಕ್ರಿಯೆ!

Update: 2017-01-07 13:20 IST

ಢಾಕಾ, ಜ.7: ಬಾಂಗ್ಲಾದೇಶದ ‘ಟ್ರೀ ಮ್ಯಾನ್’ ಎಂದೇ ಖ್ಯಾತಿ ಪಡೆದಿದ್ದ 27 ವರ್ಷದ ಅಬುಲ್ ಬಜಂದಾರ್ ಮೊಗದಲ್ಲಿ ಈಗ ಸಂತಸ ಮನೆಮಾಡಿದೆ. ‘‘ನನ್ನ ಮೂರು ವರ್ಷದ ಮಗಳನ್ನು ಇನ್ನು ಕೆಲವೇ ದಿನಗಳಲ್ಲಿ ನನಗೆ ಎತ್ತಿಕೊಳ್ಳಬಹುದು’’ ಎಂದು ಆತ ಆನಂದ ತುಂದಿಲನಾಗಿ ಹೇಳುತ್ತಾನೆ. ಅದಕ್ಕೆ ಕಾರಣವೂ ಇದೆ. ಕಳೆದೊಂದು ವರ್ಷದಲ್ಲಿ ವೈದ್ಯರ ಸತತ ಪ್ರಯತ್ನಗಳ ಫಲವಾಗಿ ಆತ ಬರೋಬ್ಬರಿ 16 ಶಸ್ತ್ರಚಿಕಿತ್ಸೆಗೊಳಗಾಗಿದ್ದಾನೆ. ಆತನ ಕೈ ಹಾಗೂ ಕಾಲುಗಳಲ್ಲಿ ಮರದ ತೊಗಟೆಯ ರೀತಿಯ ಬೆಳವಣಿಗೆಗಳನ್ನು ತೆಗೆಯಲು ವೈದ್ಯರು ಇಷ್ಟೆಲ್ಲಾ ಶಸ್ತ್ರಕ್ರಿಯೆಗಳನ್ನು ನಡೆಸಬೇಕಾಗಿತ್ತು.

ಒಂದೊಮ್ಮೆ ಆಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದ ಅಬುಲ್‌ ಕೈಗಳಿಂದ ವೈದ್ಯರು ಸುಮಾರು 5 ಕೆ.ಜಿ.ಯಷ್ಟು ಅನೈಸರ್ಗಿಕ ಬೆಳವಣಿಗೆಗಳನು ತೆಗೆದು ಹಾಕಿದ್ದಾರೆ. ಆತನಿಗಿರುವ ಅಪರೂಪದ ಕಾಯಿಲೆಯ ಹೆಸರು 'ಎಪಿಡರ್ಮೊಡಿಸ್ಪ್ಲಾಸಿಯಾ ವೆರ್ರುಸಿಫಾರ್ಮಿಸ್' ಎಂಬುದು. ಇದನ್ನು ‘ಟ್ರೀ ಮ್ಯಾನ್ ಡಿಸೀಸ್’ ಎಂದೂ ಹೇಳಲಾಗುತ್ತಿದೆ ಹಾಗೂ ಜಗತ್ತಿನಲ್ಲಿ ಇಲ್ಲಿಯ ತನಕ ಕೇವಲ ನಾಲ್ಕು ಮಂದಿ ಈ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ.

''ಆತನನ್ನು 30 ದಿನಗಳೊಳಗಾಗಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು. ಇನ್ನೆರಡು ಸಣ್ಣ ಶಸ್ತ್ರಕ್ರಿಯೆಗಳ ಅಗತ್ಯ ಆತನಿಗೆ ಇದೆ'' ಎಂದು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಮಂತಾ ಲಾಲ್ ಸೇನ್ ಹೇಳುತ್ತಾರೆ.

ಕಳೆದೊಂದು ವರ್ಷದಿಂದ ಅಬುಲ್ ಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು., ಆತನ ಪತ್ನಿ ಹಾಗೂ ಮಗಳು ಕೂಡ ಆಸ್ಪತ್ರೆಯಲ್ಲಿಯೇ ವಾಸವಾಗಿದ್ದಾರೆ.

ಅಬುಲ್ ಕೈಯಲ್ಲಿನ ಅಸ್ವಾಭಾವಿಕ ಬೆಳವಣಿಗೆಗಳು ಮತ್ತೆ ಕಾಣಿಸದೇ ಇದ್ದಲ್ಲಿ ಆತ ಈ ಕಾಯಿಲೆಯಿಂದ ಸಂಪೂರ್ಣ ಗುಣಮುಖನಾದ ಪ್ರಥಮ ವ್ಯಕ್ತಿಯಾಗಲಿದ್ದಾನೆ.

ಅಬುಲ್ ಖಲ್ನಾ ಜಿಲ್ಲೆಯಸಣ್ಣ ಗ್ರಾಮದಿಂದ ಬಂದವನಾಗಿದ್ದು ಆತನಿಗೆ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಆತ ತಾನು ಮದುವೆಯಾಗಲಿರುವ ಹಾಲಿಮಾ ಖಟುನ್ ಳನ್ನು ಭೇಟಿಯಾಗಿದ್ದ. ಆದರೆ ಮದುವೆಯಾಗುವಷ್ಟರ ಹೊತ್ತಿಗೆ ಆತನಿಗೆ ಈ ರೋಗ ಅಂಟಿಕೊಂಡಿತ್ತು. ಆದರೂ ಆಕೆಯ ಹೆತ್ತವರ ವಿರೋಧದ ನಡುವೆ ಅವರಿಬ್ಬರು ವಿವಾಹವಾಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News