ಗುಜರಾತ್ ಜೈಲುಗಳಲ್ಲಿ ದಲಿತರ ಮೇಲೆ ದೌರ್ಜನ್ಯ: ಮಾನವಹಕ್ಕು ಆಯೋಗದಿಂದ ಜೈಲು ಐಜಿಗೆ ನೋಟಿಸ್

Update: 2017-01-07 13:31 GMT

ಹೊಸದಿಲ್ಲಿ,ಜ.7: ಗುಜರಾತ್ ಜೈಲುಗಳಲ್ಲಿ ದಲಿತ ಕೈದಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ವರದಿಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವಹಕ್ಕು ಆಯೋಗ ಜೈಲು ಐಜಿಗೆ ನೋಟಿಸು ನೀಡಿದೆ. ಅಮ್ರೇಲಿ ಜಿಲ್ಲಾ ಜೈಲಿನಲ್ಲಿ ಕುಡಿಯುವ ನೀರನ್ನು ದಲಿತರಿಗೆ ನೀಡುತ್ತಿಲ್ಲ, ಅವರನ್ನು ಹಿಂಸಿಸಲಾಗುತ್ತಿದೆ, ಜೈಲು ಸುಪರಿಡೆಂಟ್ ದಲಿತರು ನೀಡುವ ದೂರನ್ನು ಸ್ವೀಕರಿಸಿಲ್ಲ. ಜೈಲಿನ ಈ ವಾತಾವರಣದ ಕುರಿತು ಒಂದು ವಾರಗಳೊಳಗೆ ಉತ್ತರಿಸಬೇಕೆಂದು ಮಾನವಹಕ್ಕು ಆಯೋಗ ಬಂದಿಖಾನೆ ಐಜಿಗೆ ನೋಟಿಸು ಕಳುಹಿಸಿದೆ.

ನೋಟಿಸಿನಲ್ಲಿ ಆಯೋಗ ಜೀವಿಸುವ ಮತ್ತು ಸಮಾನ ಹಕ್ಕು ಎಲ್ಲರಿಗೂ ಎಂದು ಐಜಿಗೆ ನೆನಪಿಸಿದ ಆಯೋಗ, ವಿಚಾರಣಾಧೀನ ಕೈದಿಯಾಗಿ ಅಮ್ರೇಲಿ ಜೈಲಿನಲ್ಲಿ 111 ದಿವಸ ಇದ್ದ ವಕೀಲ ನವ್‌ಚೇತನ್ ಪರ್ಮಾರ್ ತನ್ನ ಕತೆ ಹಾಗೂ ಜೈಲಿನಲ್ಲಿ ದಲಿತ ಕೈದಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಬಹಿರಂಗಗೊಳಿಸಿದ್ದರು. ದಲಿತ ಆಂದೋಲನದಲ್ಲಿ ಭಾಗವಹಿಸಿದ ವ್ಯಕ್ತಿ ನವ್‌ಚೇತನ್ ಎಂದರಿತೊಡನೆ ಸವರ್ಣೀಯ ಕೈದಿಗಳು ಅವರನ್ನು ಹಿಂಸಿಸಲು ಆರಂಭಿಸಿದ್ದರು.

ಸವರ್ಣೀಯರ ಬಟ್ಟೆ ಒಗೆಯುವುದು. ಪಾತ್ರೆ ತೊಳೆಯುವುದು, ರಾತ್ರಿ ಕಾಲು ಒತ್ತುವುದು ಇತ್ಯಾದಿ ಜೈಲಿನಲ್ಲಿ ರೂಢಿಯಾಗಿದೆ ಎಂದು ನವ್‌ಚೇತನ್ ಹೇಳಿದ್ದರು. ಇವೆಲ್ಲವನ್ನೂ ಬೆಟ್ಟು ಮಾಡಿ ಜೈಲು ಐಜಿಗೆ ಮಾನವಹಕ್ಕು ಆಯೋಗ ನೋಟಿಸು ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News