×
Ad

ವೈದ್ಯರ ಮೇಲೆ ಹಲ್ಲೆ ನಡೆಸಿದ ಸಂಸದರ ಬಂಧನಕ್ಕೆ ಆಗ್ರಹಿಸಿ ವೈದ್ಯರಿಂದ ಧರಣಿ

Update: 2017-01-07 19:05 IST

ಉಡುಪಿ, ಜ.7: ಶಿರಸಿಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಉತ್ತಕ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಬಂಧಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯು ಶನಿವಾರ ಹೊರರೋಗಿ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಿ ಉಡುಪಿ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.

ಸಂಸದ ಅನಂತಕುಮಾರ್ ಹೆಗಡೆ ವೈದ್ಯರ ಮೇಲೆ ಕಾನೂನು ಬಾಹಿರ ವಾಗಿ, ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಕಾನೂನನ್ನು ಕಾಪಾಡುವವರೆ ಕಾನೂನು ಕೈಗೆತ್ತಿಕೊಂಡಿರುವುದರಿಂದ ಸರಕಾರ ಕೂಡಲೇ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮನೋವೈದ್ಯ ಡಾ.ಪಿ.ವಿ.ಭಂಡಾರಿ ಒತ್ತಾಯಿಸಿದರು.

ಧರಣಿಯಲ್ಲಿ ಉಡುಪಿ ಕರಾವಳಿ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮುರಳೀಧರ್ ಪಾಟೀಲ್, ಕೋಶಾಧಿಕಾರಿ ಡಾ.ವೆಂಕಟೇಶ್ ಶ್ಯಾನುಭಾಗ್, ಉಪಾಧ್ಯಕ್ಷ ಡಾ.ವೈ.ಎಸ್.ರಾವ್, ಜಂಟಿ ಖಜಾಂಚಿ ಡಾ.ಕಿರಣ್ ಕುಮಾರ್, ಡಾ.ಸತೀಶ್ ಕಾಮತ್, ಡಾ.ಚಂದ್ರಶೇಖರ್ ಅಡಿಗ, ಡಾ. ಅಶೋಕ್ ಕುಮಾರ್, ಡಾ.ವಾಸುದೇವ ಸೋಮಯಾಜಿ, ಡಾ.ಗೀತಾ ಪುತ್ರನ್, ಡಾ.ವಾಸುದೇವ ಎಸ್., ಡಾ.ಆರ್.ಎನ್.ಭಟ್, ಡಾ.ವಿಜಯ ಕುಮಾರ್ ಶೆಟ್ಟಿ, ಡಾ.ಅಶೋಕಕುಮಾರ್ ವೈ.ಜಿ., ಡಾ.ನವೀನ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಐಎಂಎ ಉಡುಪಿ-ಕರಾವಳಿ ಶಾಖೆಯ ನಿಯೋಗವೊಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಮೂಲಕ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿಯೊಂದನ್ನು ಅರ್ಪಿಸಿ, ಹಲ್ಲೆ ನಡೆಸಿದ ಸಂಸದ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದಂತೆ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.

ರಾಜ್ಯದಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದು, ಅವುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಸಚಿವರನ್ನು ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News