×
Ad

ಬಂಟ್ವಾಳ : ತಾಲೂಕು ಮಟ್ಟದ ಜನಸಂಪರ್ಕ ಸಭೆ

Update: 2017-01-07 20:38 IST

ಬಂಟ್ವಾಳ, ಜ. 7: ಕರ್ನಾಟಕ ರಾಜ್ಯದಲ್ಲಿ ಸರಕಾರಿ ಸವಲತ್ತುಗಳನ್ನು ಪಡೆದವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಅಧಿಕ. 94ಸಿ, 94ಸಿಸಿಯಡಿ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು ಇದು ಜಿಲ್ಲೆಯ ಜನ ರಾಜ್ಯ ಸರಕಾರದ ಸವಲತ್ತುಗಳನ್ನು ಅತಿ ಹೆಚ್ಚು ಪಡೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

 ಮೇಲ್ಕಾರ್‌ನ ಬಿರ್ವ ಆಡಿಟೋರಿಯಂನಲ್ಲಿ ತಾಲೂಕು ಮಟ್ಟದ ಜನಸಂಪರ್ಕ ಸಭೆ, ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಸರಕಾದ ಸವಲತ್ತುಗಳನ್ನು ತಲುಪಿಸಲು ನಿರಾಸಕ್ತಿ ವಹಿಸುವ ಅಧಿಕಾರಿಗಳು ಜಾಗ ಖಾಲಿ ಮಾಡಬೇಕಾದ ಅವಸ್ಥೆ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರತೀ ಜನಸ್ಪಂದನ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಸರಕಾರಿ ಸವಲತ್ತುಗಳನ್ನು ಪಡೆದವರು ಸರಕಾರದ ವಿರುದ್ಧವೇ ಟೀಕೆ ಮಾಡುವುದು ಸರಿಯಲ್ಲ. ಸರಕಾರದ ಸವಲತ್ತುಗಳಲ್ಲಿರುವ ಚಿಕ್ಕಪುಟ್ಟ ಲೋಪಗಳನ್ನೇ ಬೊಟ್ಟು ಮಾಡಿ ಆದನ್ನು ಟೀಕಿಸುವುದು ನಿಲ್ಲಬೇಕಾಗಿದೆ. ಟೀಕಿಸಲೇ ಇರುವವರು ಸರಕಾರ ಮಾಡಿರುವ ಉತ್ತಮ ಕಾರ್ಯವನ್ನು ನೋಡಿ ಎಂದು ಸಚಿವ ರೈ ಹೇಳಿದರು.

94ಸಿಸಿಯಡಿ ಆದೇಶ ಬಂದ ಬಳಿಕ ಹಕ್ಕುಪತ್ರ ವಿತರಿಸಲಾಗುವುದು. ಸರಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಸವಲತ್ತುಗಳನ್ನು ಜನರಿಗೆ ಒದಗಿಸಲು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸದಸ್ಯರಾದ ಆದಂ ಕುಂಞ, ಸಂಜೀವ ಪೂಜಾರಿ, ಕುಮಾರ ಭಟ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ತಹಸೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು.

ತಾಪಂ ಇಒ ಸಿಪ್ರಿಯನ್ ಮಿರಾಂದಾ ವಂದಿಸಿದರು.

ಈ ಸಂದರ್ಭ ತಾಲೂಕಿನ 50 ಫಲಾನುಭವಿಗಳಿಗೆ ಹಕ್ಕುಪತ್ರ, 17 ಮಂದಿಗೆ 1,94,821 ರೂಗಳ ಚೆಕ್, ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News