×
Ad

ಮಾನವೀಯ ಕಾಳಜಿಯೊಂದಿಗೆ ನೈಜ ಸುದ್ದಿ ನೀಡುತ್ತಿರುವ ಪ್ರಮುಖ ಪತ್ರಿಕೆ ವಾರ್ತಾಭಾರತಿ

Update: 2017-01-07 21:12 IST

ಮಂಗಳೂರು, ಜ.7: ‘‘ವಾರ್ತಾಭಾರತಿ ಕಳೆದ 14 ವರ್ಷಗಳಿಂದ ಮಾನವೀಯ ಕಾಳಜಿಯೊಂದಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಪ್ರಪಂಚದ ವಿವಿಧೆಡೆಗಳ ನೈಜ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ದಿನಪತ್ರಿಕೆಯಾಗಿ ಬೆಳೆದಿದೆ’’ ಎಂದು ಮಹಾಬಲೇಶ್ವರ ಪ್ರಮೋಟರ್ಸ್‌ ಆ್ಯಂಡ್ ಬಿಲ್ಡರ್ಸ್‌ನ ಅಧ್ಯಕ್ಷ ಕೆ.ಸಿ.ನಾಯ್ಕ್ ಹೇಳಿದ್ದಾರೆ.

ವೆಲೆನ್ಸಿಯಾದಲ್ಲಿರುವ ‘ವಾರ್ತಾಭಾರತಿ’ಯ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ‘ವಾರ್ತಾಭಾರತಿ ನ್ಯೂಸ್ ಆ್ಯಪ್’ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 ‘‘ನಾನು ಮುಂಜಾನೆ ಕೈಗೆತ್ತಿಕೊಳ್ಳುವ ಪ್ರಪ್ರಥಮ ಪತ್ರಿಕೆ ‘ವಾರ್ತಾಭಾರತಿ’. ಇದು ತಿರುಚದೆ, ವಸ್ತುನಿಷ್ಠವಾಗಿ ಸುದ್ದಿಗಳನ್ನು ಓದುಗ ರಿಗೆ ನೀಡುತ್ತಿದೆ. ‘ವಾರ್ತಾಭಾರತಿ’ ಇದೀಗ ಕಾಲದೊಂದಿಗೆ ಬೆಳೆದಿದ್ದು, ತಂತ್ರಜ್ಞಾನದ ಜೊತೆ ಬದಲಾಗುತ್ತಿದೆ. ಈಗ ಇಡೀ ವಿಶ್ವದ ಎಲ್ಲೆಡೆಯ ಸುದ್ದಿಗಳನ್ನು ಕ್ಷಣಕ್ಷಣ ‘ವಾರ್ತಾಭಾರತಿ’ ನಮ್ಮ ಮೊಬೈಲ್ ಫೋನ್‌ಗೆ ತಲುಪಿಸುತ್ತಿದೆ. ಈಗ ಪತ್ರಿಕೆಯ ಆ್ಯಪ್ ಬಂದಿದೆ. ಇದು ಸಂತಸದ ವಿಷಯ. ಕಳೆದ ಹದಿನಾಲ್ಕು ವರ್ಷಗಳಲ್ಲಿ ‘ವಾರ್ತಾಭಾರತಿ’ ಸಾಕಷ್ಟು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಈ ಹಂತಕ್ಕೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಬೆಳೆಯಲಿ’’ ಎಂದು ಹಾರೈಸಿದರು.

ಜುಬೈಲ್‌ನ ಅಲ್‌ಮುಝೈನ್ ಗ್ರೂಪ್‌ನ ಆಡಳಿತ ನಿರ್ದೇಶಕ ಝಕರಿಯಾ ಜೋಕಟ್ಟೆ ‘ವಾರ್ತಾಭಾರತಿ ನ್ಯೂಸ್ ಆ್ಯಪ್’ ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು, ಪತ್ರಿಕೆ ಬೆಳೆಯಬೇಕಾದರೆ ಓದುಗರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ‘ವಾರ್ತಾಭಾರತಿ’ಯ ಬೆಳವಣಿಗೆಗೆ ಜನರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವಿಸಸ್ ಪ್ರೈ.ಲಿ.ನ ಅಧ್ಯಕ್ಷ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಸಿ.ಪಿ.ಹಬೀಬ್ ರಹ್ಮಾನ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವೌಲ್ಯಗಳನ್ನು ಉಳಿಸಿಕೊಂಡು ಜನರಿಗೆ ವಾಸ್ತವ ಸಂಗತಿಗಳನ್ನು ತಿಳಿಸುವ ‘ವಾರ್ತಾಭಾರತಿ’ಯ ಕಾರ್ಯವೈಖರಿ ಶ್ಲಾಘನೀಯ ಎಂದರು.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಮಾತನಾಡಿ, ‘ವಾರ್ತಾಭಾರತಿ’ ಪತ್ರಿಕೆ ಮತ್ತು ವೆಬ್‌ಸೈಟ್‌ನ್ನು ಗಮನಿಸುತ್ತಿದ್ದೇನೆ. ಉತ್ತಮವಾಗಿ ಮೂಡಿಬರುತ್ತಿದೆ. ಸಮಾಜದ ಶಾಂತಿ ಸೌಹಾರ್ದ ಕಾಪಾಡುವಲ್ಲಿ ಈ ಪತ್ರಿಕೆ ಮುಂದೆಯೂ ಕೊಡುಗೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

 ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಮಾತನಾಡಿ, ವಸ್ತುನಿಷ್ಠ ವರದಿಯನ್ನು ಓದುಗರಿಗೆ ನೀಡುವಲ್ಲಿ ವಾರ್ತಾಭಾರತಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಹಿರಿಯ ನ್ಯಾಯವಾದಿ ಸಾದುದ್ದೀನ್ ಸಾಲಿಹ್ ಮಾತನಾಡಿ, ‘ವಾರ್ತಾಭಾರತಿ’ ಎಲ್ಲಾ ಸಮುದಾಯಕ್ಕೆ ಸೇರಿದ ಪತ್ರಿಕೆಯಾಗಿದೆ ಎಂದರು.

 ಗ್ಲೋಬ್ ಟ್ರಾವೆಲ್ಸ್ ಮಂಗಳೂರು ಇದರ ಅಧ್ಯಕ್ಷ ವಿಲಿಯಂ ಡಿಸೋಜ ಮಾತನಾಡಿ ಶುಭ ಹಾರೈಸಿದರು. ಪ್ಲಾಮಾ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಪಿ.ಎಂ.ಎ.ರಝಾಕ್ ಉಪಸ್ಥಿತರಿದ್ದರು

ಮಾಧ್ಯಮ ಕಮ್ಯುನಿಕೇಶನ್ಸ್ ಲಿ.ನ ನಿರ್ದೇಶಕ ಎಚ್.ಎಂ.ಅಫ್ರೋಝ್ ಅಸಾದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ‘ವಾರ್ತಾಭಾರತಿ’ ವೆಬ್‌ಸೈಟ್ ತಂಡದ ಸದಸ್ಯರಿಗೆ ಸ್ಮರಣಿಕೆ ಪ್ರದಾನ ಮಾಡಿದರು.

 ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.
ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ವಾರ್ತಾಭಾರತಿ ಮಂಗಳೂರು ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News