ಮಹಿಳೆಯ ಸರ ಅಪಹರಣ
ಉಡುಪಿ, ಜ.7: ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಮೀಪ ಮಂಗೇಶ್ ಟವರ್ ಬಳಿ ಜ.6ರಂದು ಸಂಜೆ 5:50ರ ಸುಮಾರಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಉಡುಪಿ ಬುಡ್ನಾರು ರಸ್ತೆಯ ಪಣಿಯಾಡಿ ನಿವಾಸಿ ಮಾಧವ ರಾವ್ ಎಂಬವರ ಪತ್ನಿ ಯಶೋದಮ್ಮ(70) ಎಂಬವರು ತನ್ನ ಮಗಳು ಭಾಗ್ಯಲಕ್ಷ್ಮೀ ಮತ್ತು ಮೊಮ್ಮಗ ಭರತ್ ಜೊತೆ ಶಾರದ ಕಲ್ಯಾಣ ಮಂಟಪದ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಮಗಳು ಮೊಮ್ಮಗ ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದರೆ ಯೋದಮ್ಮ ಹಿಂದಿನಿಂದ ಬರುತ್ತಿದ್ದರು.
ಆಗ ಇಬ್ಬರು ಅಪರಿಚಿತರು ಕೆಂಪು ಬಣ್ಣದ ಬೈಕನ್ನು ಶಾರದ ಕಲ್ಯಾಣ ಮಂಟಪ ಕಡೆಯಿಂದ ಬುಡ್ನಾರು ಕಡೆಗೆ ಚಲಾಯಿಸಿಕೊಂಡು ಬಂದು ಯಶೋದಮ್ಮರ ಹತ್ತಿರ ನಿಲ್ಲಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಪರಾರಿಯಾದರು. ಇದರ ಮೌಲ್ಯ 80ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದು ನೀಲಿ ಬಣ್ಣದ ಜೀನ್ಸ್ ಮತ್ತು ದೊಡ್ಡ ಕಪ್ಪುಚೆಕ್ಸ್ ಇರುವ ತುಂಬು ತೋಳಿನ ಶರ್ಟ್ ಮತ್ತು ಹಿಂಬದಿ ಸವಾರ ನೀಲಿ ಬಣ್ಣದ ಜೀನ್ಸ್ ಹಾಗೂ ಹ್ಯಾಶ್ ಕಲರಿನ ತುಂಬು ತೋಳಿನ ಶರ್ಟ್ ಧರಿಸಿದ್ದರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.