ಕೋಡಿಕನ್ಯಾಣ ಜೆಟ್ಟಿ ಹೂಳೆತ್ತಲು ಮೀನುಗಾರರ ಆಗ್ರಹ
ಮಣಿಪಾಲ, ಜ.7: ಸಾಸ್ತಾನದ ಸಮೀಪದ ಕೋಡಿಕನ್ಯಾಣ ಜೆಟ್ಟಿ ನಿರ್ಮಾಣ ವಾಗಿ ವರುಷಗಳೇ ಉರುಳಿದರೂ ಹೂಳೆತ್ತುವ ಕಾಮಗಾರಿ ಪ್ರಾರಂಭವಾಗದೇ ಸಾವಿರಾರು ಮೀನುಗಾರರು ತಮ್ಮ ಯಾಂತ್ರಿಕ ಬೋಟ್ ನಿಲುಗಡೆಗೆ ಪರದಾಟ ಪಡುವಂತಾಗಿದೆ. ಕೋಡಿಕನ್ಯಾಣ ಪರಿಸರದ ಮೀನುಗಾರರಿಗೆ ಅನುಕೂಲ ಮಾಡಿಕೊಡಲು ಹೂಳೆತ್ತುವ ಕಾಮಗಾರಿಯನ್ನು ಸಾಧ್ಯವಿದ್ದಷ್ಟು ಬೇಗ ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಜಿ. ವೆಂಕಟೇಶ್ ಅವರಿಗೆ ಮೀನುಗಾರಿಕಾ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಇತರ ಪ್ರದೇಶಗಳಲ್ಲಿ ಮೀನುಗಾರಿಕಾ ದೋಣಿಗಳ ಒತ್ತಡದಿಂದ ನಿಲುಗಡೆಗೆ ಜಾಗ ಕಡಿಮೆಯಾಗಿ ಅನೇಕ ಸಲ ಕಾನೂನು ಸುವ್ಯವಸ್ಥೆ ಹದಗೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಒಟ್ಟು ಅನುದಾನದಲ್ಲಿ ಕೋಡಿಕನ್ಯಾಣ ಜೆಟ್ಟಿ ಪ್ರದೇಶದ ಆವರಣದಲ್ಲಿ ಹೂಳೆತ್ತುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗುತ್ತಿಗೆ ನೀಡಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೀನುಗಾರರ ಪರವಾಗಿ ಮೀನುಗಾರರ ಮುಖಂಡರಾದ ಶಂಕರ್ ಎ. ಕುಂದರ್, ಪ್ರಭಾಕರ ಮೆಂಡನ್, ಅಣ್ಣಪ್ಪಕುಂದರ್, ಅಂತೋನಿ ಡಿಸೋಜಾ, ಚಂದ್ರ ಕಾಂಚನ್, ತೇಜ ಪೂಜಾರಿ, ದಯಾನಂದ ಸಾಲಿಯಾನ್, ಅಶೋಕ ತಿಂಗಳಾಯ, ಸುಂದರ ಮುಂತಾದವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಂದರು ಇಲಾಖೆಯ ಇಂಜಿನಿಯರ್ ದಯಾನಂದ, ನಾಗರಾಜ್, ಗಣಪತಿ ಭಟ್ ಉಪಸ್ಥಿತರಿದ್ದರು.