×
Ad

ಸಚಿವ ರೋಶನ್ ಬೇಗ್ ರಿಂಧ ಮನಪಾ ಪ್ರಗತಿ ಪರಿಶೀಲನೆ ಸಭೆ

Update: 2017-01-07 22:53 IST

ಮಂಗಳೂರು, ಜ. 7: ಸಮುದ್ರ ನೀರನ್ನು ಶುದ್ಧೀಕರಿಸಿ ಕುಡಿಯುವ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಯೋಜನೆಯನ್ನು ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನೀರಿನ ಕೊರತೆ ವಿಪರೀತವಾಗಿ ತಲೆದೋರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಯೋಜನೆ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಈ ಯೋಜನೆಗೆ ಮುಂದಾಗಿದೆ. ತಮಿಳುನಾಡಿನಲ್ಲಿ ಈಗಾಗಲೇ ಸಮುದ್ರ ನೀರನ್ನು ಶುದ್ಧೀಕರಿಸಿ ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಬಳಸಲಾಗುತ್ತಿದೆ. ಈ ಕುರಿತು ಅಲ್ಲಿನ ತಜ್ಞರು ಬೆಂಗಳೂರಿಗೆ ಆಗಮಿಸಿ ಸರಕಾರದ ಮುಂದೆ ವಿಚಾರ ಮಂಡಿಸಿದ್ದಾರೆ. ತಮಿಳುನಾಡಿನ ಒಂದು ಭಾಗಕ್ಕೆ ಶುದ್ಧೀಕೃತ ಸಮುದ್ರ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.

ತಮಿಳುನಾಡು ಮಾದರಿಯಲ್ಲಿ ಮಂಗಳೂರಿನಲ್ಲಿ ಸಮುದ್ರ ನೀರು ಶುದ್ಧೀಕರಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಇಲ್ಲಿನ ಪಾಲಿಕೆಯ ಸದಸ್ಯರು ಚೆನ್ನೈಗೆ ತೆರಳಿ ಅಲ್ಲಿ ಯಾವ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂಬುದನ್ನು ಪರಾಮರ್ಶೆ ನಡೆಸಬೇಕು. ಇನ್ನು 15 ದಿನಗಳೊಳಗೆ ನಾನು ಮತ್ತೆ ತಜ್ಞರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು.

ಬರಪೀಡಿತ ಜಿಲ್ಲೆಗಳಿಗೆ ನೀರು

ಸಮುದ್ರ ನೀರನ್ನು ಶುದ್ಧೀಕರಿಸುವ ಈ ಯೋಜನೆಯಲ್ಲಿ ಯಶಸ್ವಿಯಾದರೆ, ಇದೇ ನೀರನ್ನು ಸಕಲೇಶಪುರದವರೆಗೆ ಪೂರೈಕೆ ಮಾಡಬಹುದು. ನೀರಿನ ಕೊರತೆಯನ್ನು ಹೋಗಲಾಡಿಸಲು ಈ ಶುದ್ಧೀಕೃತ ಸಮುದ್ರ ನೀರನ್ನು ಅಲ್ಲಿಗೆ ಜೋಡಿಸಿದರೆ ಬರಪೀಡಿತ ಜಿಲ್ಲೆಗಳಿಗೆ ಸಮಗ್ರ ನೀರು ಪೂರೈಸಲು ಸಾಧ್ಯವಿದೆ ಎಂದು ಸಚಿವ ರೋಷನ್ ಬೇಗ್ ಸ್ಪಷ್ಟಪಡಿಸಿದರು.

ಹೊಸ ಕಮಿಷನರೇಟ್:

ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆಯನ್ನು ಸೇರಿಸಿ ಹೊಸ ಕಮಿಷನರೇಟ್‌ನ್ನು ರಚಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವ ಬೇಗ್ ತಿಳಿಸಿದರು.

ಹೊಸ ಕಮಿಷನರೇಟ್‌ನ ಈ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಈ ಕಮಿಷನರೇಟ್‌ನ ಸ್ವರೂಪದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಕಮಿಷನರೇಟ್‌ಗೆ ಆಯುಕ್ತರ ನೇಮಕವಾಗಬೇಕು ಎಂಬ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದರು.

ಡ್ಯಾಂ ಸಂತ್ರಸತಿರಿಗೆ ಪರಿಹಾರ ಕೋರಿಕೆ:

 ಮಂಗಳೂರಿಗೆ ಸಮಗ್ರ ನೀರು ಪೂರೈಸಲು ತುಂಬೆಯಲ್ಲಿ ಸ್ಥಾಪಿಸಿದ ಹೊಸ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಲಾಗಿದೆ. ಇದರಿಂದ 50 ಎಕರೆ ಜಾಗ ಮುಳುಗಡೆಯಾಗುತ್ತಿದ್ದು, ಇದರಲ್ಲಿ 16 ಎಕರೆ ಜಾಗ ರೈತರಿಗೆ ಸೇರಿದ್ದು. ಸಂತ್ರಸ್ತರಿಗೆ ಇನ್ನೂ ಪರಿಹಾರ ಪಾವತಿಸಿಲ್ಲ. ಸದ್ಯಕ್ಕೆ 2.6 ಲಕ್ಷ ರೂ.ಗಳನ್ನು ವಾರ್ಷಿಕ ಬಾಡಿಗೆಯಾಗಿ ರೈತರಿಗೆ ಪಾವತಿಸಲಾಗುತ್ತದೆ. 7 ಮೀಟರ್‌ವರೆಗೆ ನೀರು ನಿಲ್ಲಿಸಿದರೆ 300 ಎಕರೆ ಜಾಗ ಮುಳುಗಡೆಯಾಗಲಿದೆ. ಸುಮಾರು 250 ಕೋಟಿ ರೂ. ಪರಿಹಾರ ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು ಸರಕಾರ ಬಿಡುಗಡೆಗೊಳಿಸಬೇಕು ಎಂದು ಮೇಯರ್ ಹರಿನಾಥ್ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕಾಟಿಪಳ್ಳ ಪರಿಸರದಲ್ಲಿ ಕಲುಷಿತ ನೀರು ಕಂಡುಬಂದ ಹಿನ್ನೆಲೆಯಲ್ಲಿ ನೀರನ್ನು 2 ಕಡೆ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಆಯುಕ್ತ ಮುಹಮ್ಮದ್ ನಜೀರ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News