ದಸರಾ ವಸ್ತು ಪ್ರದರ್ಶನದಲ್ಲಿ ದ.ಕ ಜಿಲ್ಲೆಗೆ ಪ್ರಥಮ ಪ್ರಶಸ್ತಿ
ಮಂಗಳೂರು, ಜ.7: ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನ-2016ರಲ್ಲಿ ದಕ್ಷಿಣ ಜಿಲ್ಲೆಯಿಂದ ಸ್ಥಾಪಿತವಾದ ಮಳಿಗೆಗೆ ಪ್ರಥಮ ಬಹುಮಾನ ಲಭಿಸಿದೆ.
ವಸ್ತು ಪ್ರದರ್ಶನದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ತಮ್ಮದೇ ಆದ ಮಳಿಗೆಗಳನ್ನು ಸ್ಥಾಪಿಸಿದ್ದವು. ಈ ಮೂಲಕ ತಮ್ಮ ಜಿಲ್ಲೆಗಳ ವಿಶೇಷತೆಯನ್ನು ಸಾರುವ ಪ್ರಯತ್ನವನ್ನು ಮಾಡಿದ್ದವು. ಪ್ರತಿಯೊಂದು ಮಳಿಗೆಗಳು ಒಂದಕ್ಕಿಂತ ಇನ್ನೊಂದು ವಿಶೇಷ ಎಂಬಂತೆ ಪೈಪೋಟಿಯನ್ನು ನೀಡಿದ್ದವು.
ದಕ್ಷಿಣ ಕನ್ನಡ ಜಿಲ್ಲೆಯ ವಸ್ತುಪ್ರದರ್ಶನ ಮಳಿಗೆಯ ಪ್ರವೇಶ ದ್ವಾರದಲ್ಲಿ 16ನೆ ಶತಮಾನದ ಧೀರ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕರ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಲಾಗಿತ್ತು. ಪ್ರತಿಮೆಯಲ್ಲಿ ರಾಣಿ ಅಬ್ಬಕ್ಕ ಕುದುರೆಯೇರಿ ತನ್ನ ಸೈನಿಕರ ಜೊತೆ ಶತ್ರುಗಳ ವಿರುದ್ಧ ಹೋರಾಡುವ ದೃಶ್ಯವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಪ್ರವೇಶ ದ್ವಾರದ ಮುಂಭಾಗ ತೆಂಗು, ಅಡಿಕೆ, ಸಿರಿ ಸಿಂಗಾರದ ದ್ವಾರದಿಂದ ಅಲಂಕರಿಸಲಾಗಿತ್ತು. ಇದಲ್ಲದೇ ದೋಣಿಯ ಮಾದರಿ ಅಳವಡಿಸಲಾಗಿತ್ತು.
ಮಳಿಗೆಯ ಒಳಭಾಗದಲ್ಲಿ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಗಳು, ವಿವಿಧ ಯಕ್ಷಗಾನ ಪಾತ್ರಗಳು, ದೇವರಾಧನೆ, ಹುಲಿನೃತ್ಯ, ಆಟಿಕಳೆಂಜ, ಕುಡುಬಿ ಮತ್ತು ಕೊರಗ ಜನಾಂಗದ ನೃತ್ಯಗಳು, ಕಂಗೀಲು, ಸಿದ್ಧವೇಷ, ಚೆನ್ನು ನಲಿಕೆ, ಮಾದಕ ವಸ್ತುಗಳ ಸೇವನೆಯಿಂದ ರೋಗಗೃಸ್ಥನಾಗಿರುವ ಮನುಷ್ಯ, ತ್ಯಾಜ್ಯ ವಸ್ತುಗಳಿಂದ ಜನ-ಜಾನುವಾರುಗಳ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳು ಇವುಗಳ ಸಚಿತ್ರ ವಿವರಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದವು.
ದಕ್ಷಿಣ ಕನ್ನಡ ಜಿಲ್ಲೆಯ ವೈಮಾನಿಕ ಚಿತ್ರಣ, ನಗರದ ಕಾರ್ಖಾನೆಗಳ ಚಿತ್ರಗಳು, ಸಮುದ್ರ ಕಿನಾರೆಗಳು, ಗಾಳಿಪಟ ಉತ್ಸವ ಇವೆಲ್ಲವೂ ಜನರಿಗೆ ಖುಷಿಕೊಟ್ಟಿದ್ದವು. ಜಾನಪದ ಕಲೆಗಳನ್ನು ಗೆರೆಗಳಲ್ಲಿ ಸೆಳೆದಿಡುವ ವರ್ಲಿ ಪೇಟಿಂಗ್, ಬೀಡಿಕಟ್ಟುತ್ತಿರುವ ಮಹಿಳೆ, ಮೀನು ಮಾರಾಟ ಮಾಡುತ್ತಿರುವ ಗೃಹಿಣಿ, ಮಂಗಳೂರಿನ ವಿವಿಧ ಬಗೆಯ ಖಾದ್ಯಗಳು, ಮಂಗಳೂರಿಗೆ ಇರುವ ಒಂಭತ್ತು ಹೆಸರುಗಳು, ಜಿಲ್ಲೆಗೆ ಸಿಕ್ಕಿರುವ ಹಲವಾರು ಪ್ರಶಸ್ತಿಗಳ ವಿವರಗಳು, ಮಂಗಳೂರಿನ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ್’ ಮಂಗಳೂರು ‘ಹಿಂದೆ ಮತ್ತು ಈಗ’ ಹೇಗಿವೆ ಎಂಬುವ ಚಿತ್ರ ವಿವರ ನೀಡಲಾಗಿದೆ.
ಸ್ವಸ್ಥ ಭಾರತ ಮಳಿಗೆಯಲ್ಲಿ ಸ್ವಚ್ಛತೆಯ ಕುರಿತಾದ ಜನಜಾಗೃತಿಗೆ ಹೆಚ್ಚು ಒತ್ತು ನೀಡಲಾಗಿತ್ತು. ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆಯ ಮಾದರಿಗಳು, ಕಸವನ್ನು ರಸ ಮಾಡುವ ಪೈಪ್ ಕಾಂಪೋಸ್ಟ್ ಮಾದರಿ, ಘನ ಮತ್ತು ದ್ರವ ತ್ಯಾಜ್ಯ ಘಟಕ, ಪ್ಲಾಸ್ಟಿಕ್ ಸೌಧ, ಬಯೋಗ್ಯಾಸ್, ನ್ಯಾಪ್ಕಿನ್ ಬರ್ನರ್ ಇತ್ಯಾದಿ ಅನೇಕ ಮಾಹಿತಿಗಳನ್ನು ಮಳಿಗೆಯಲ್ಲಿ ತಿಳಿಸಲಾಗಿತ್ತು.