ಗಾಯತ್ರಿ ನಾಯಕ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್
ಮಂಗಳೂರು, ಜ. 7: ಲಂಚ ಸ್ವೀಕಾರ ಸಂದರ್ಭ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಬಿದ್ದಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಗಾಯತ್ರಿ ಎನ್.ನಾಯಕ್ ಹಾಗೂ ಕಚೇರಿ ಸಹಾಯಕ ತುಕ್ರಪ್ಪ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರು ಸೆಷನ್ಸ್ ನ್ಯಾಯಾಲಯ ಇಂದು ತಿರಸ್ಕರಿಸಿದೆ.
ಜ.4 ರಂದು ಭೂ ಸ್ವಾಧೀನದ ಪರಿಹಾರ ಚೆಕ್ ವಿತರಿಸಲು ಯೋಗೀಶ್ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ಯೋಗೀಶ್ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದರು. ಅದರಂತೆ 25 ಸಾವಿರ ರೂ.ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ಉಪಕಾರಾಗೃಹಕ್ಕೆ ಕರೆದುಕೊಂಡು ಬಂದಾಗ ಗಾಯತ್ರಿ ನಾಯಕ್ ಅಸೌಖ್ಯದ ಕಾರಣ ಒಡ್ಡಿದ್ದರು. ಇದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯತ್ರಿ ಆಸ್ಪತ್ರೆಯಿಂಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.