ಮಗು ಮಾರಾಟ ಆರೋಪ: ಮಗು ಸಿಡಬ್ಲುಸಿ ವಶಕ್ಕೆ
ಉಡುಪಿ, ಜ.7: ಪೋಷಕರು ಹೆಣ್ಣು ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಉಡುಪಿಯ ಮಕ್ಕಳ ಕಲ್ಯಾಣ ಸಮಿತಿ 10 ದಿನಗಳ ಮಗುವನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.
ಬೈಂದೂರು ಪಡುವರಿ ಗ್ರಾಮದ ದೊಂಬೆ ನಿವಾಸಿ ಶೇಖರ ಪೂಜಾರಿ ಹಾಗೂ ನಾಗಮ್ಮ ಪೂಜಾರಿ ತಮ್ಮ ನಾಲ್ಕನೆ ಮಗುವನ್ನು ಶಿರೂರಿನ ದಂಪತಿಗೆ ಮಾರಾಟ ಮಾಡಿದ್ದಾರೆಂದು ದೂರಲಾಗಿದೆ. ನಾಗಮ್ಮ ಡಿ.28ರಂದು ತನ್ನ ನಾಲ್ಕನೆ ಮಗುವಿಗೆ ಜನ್ಮ ನೀಡಿದ್ದು, ಹೆಣ್ಣು ಮಗು ಇಷ್ಟ ಇಲ್ಲದ ಈ ಕುಟುಂಬ ಮರುದಿನವೇ ಆ ಮಗುವನ್ನು ಶಿರೂರಿನ ದಂಪತಿಗೆ ಕೊಟ್ಟಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಮಕ್ಕಳ ಕಲ್ಯಾಣ ಸಮಿತಿಯು ಪರಿಶೀಲನೆ ನಡೆಸಿ ವರದಿ ಪಡೆದುಕೊಂಡಿದ್ದು, ಅದರಂತೆ ಇಂದು ಮಗುವನ್ನು ವಶಕ್ಕೆ ಪಡೆದು ಉಡುಪಿಯ ಕೃಷ್ಣಾನುಗ್ರಹಕ್ಕೆ ಒಪ್ಪಿಸಿದೆ. ಸಮಿತಿ ಅಧ್ಯಕ್ಷ ಡಿ.ಕೆ. ನಾರಾಯಣ ಇಂದು ಪೋಷಕರನ್ನು ಹಾಗೂ ಮಗುವನ್ನು ಪಡೆದುಕೊಂಡ ದಂಪತಿಯನ್ನು ಸಮಿತಿಯ ನ್ಯಾಯಾಲಯಕ್ಕೆ ಕರೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.
‘ಪೋಷಕರ ಹೇಳಿಕೆ ಪ್ರಕಾರ ಅವರು ಮಗುವನ್ನು ಮಾರಾಟ ಮಾಡಿಲ್ಲ. ಅವರ ಪರಿಚಯದ ಕುಟುಂಬಕ್ಕೆ ಸಾಕುವುದಕ್ಕೆ ನೀಡಿದ್ದಾರೆ. ಆದರೂ ನಾವು ತನಿಖೆಯನ್ನು ಮುಂದುವರಿಸುತ್ತೇವೆ. ಇಂದು ಸಮಿತಿಯ ನ್ಯಾಯಾಲಯ ದಲ್ಲಿ ವಿಚಾರಣೆ ಆರಂಭಿಸಿದ್ದು, ಮುಂದಿನ ವಿಚಾರಣೆಯನ್ನು ಜ.13ಕ್ಕೆ ಮುಂದೂಡಲಾಗಿದೆ’ ಎಂದು ಡಿ.ಕೆ.ನಾರಾಯಣ ಪತ್ರಿಕೆಗೆ ತಿಳಿಸಿದ್ದಾರೆ.