ಉಡುಪಿಯಲ್ಲಿ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಟೂರ್ನಿ
ಉಡುಪಿ,ಜ.7: ‘ರಿಪಬ್ಲಿಕ್ ಡೇ ಟ್ರೋಫಿ’ ರಾಜ್ಯಮಟ್ಟದ ಹೊನಲು ಬೆಳಕಿನ ಹ್ಯಾಂಡ್‌ಬಾಲ್ ಪಂದ್ಯಾಟವೊಂದು ಜ.28 ಮತ್ತು 29ರಂದು ಉಡುಪಿ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಅಲೆವೂರು ಹರೀಶ್ ಕಿಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಡುಪಿಯ ಪ್ರಥಮ ಬಾರಿಗೆ ನಡೆಯುವ ರಾಜ್ಯ ಮಟ್ಟದ ಈ ಟೂರ್ನಿಯಲ್ಲಿ ರಾಜ್ಯದ 20 ಜಿಲ್ಲೆಗಳ ಪುರುಷರ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದವರು ನುಡಿದರು. ರಾಜ್ಯ ಸಂಸ್ಥೆಯಲ್ಲಿ ನೊಂದಾಯಿತ ತಂಡಗಳು ಮಾತ್ರ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹೆಸರು ನೊಂದಾಯಿಸಲು ತಂಡಗಳಿಗೆ ಜ.15ರವರೆಗೆ ಕಾಲಾವಕಾಶವಿದೆ ಎಂದು ಹರೀಶ್ ಕಿಣಿ ತಿಳಿಸಿದರು.
ಈ ಟೂರ್ನಿ ರಾಜ್ಯ ಹ್ಯಾಂಡ್‌ಬಾಲ್ ಸಂಸ್ಥೆ, ಜಿಲ್ಲಾ ಯುವಜನ ಸಬಲೀಕರಣ ತ್ತು ಕ್ರೀಡಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.
ಸೀತಾರಾಮ ಗೌಡ ಅವರು ಕಾರ್ಯದರ್ಶಿಯಾಗಿ, ನಿರುಪಮಾ ಪ್ರಸಾದ್ ಶೆಟ್ಟಿ ಖಜಾಂಚಿಯಾಗಿ ಉಪಾಧ್ಯಕ್ಷರಾಗಿ ಸುದರ್ಶನ್ ನಾಯಕ್, ವಿದ್ಯಲತಾ ಶೆಟ್ಟಿ ಕಾರ್ಯನಿರ್ವಹಿಸುತಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೀತಾರಾಮ ಗೌಡ, ನಿರುಪಮಾ ಪ್ರಸಾದ್, ಸುದರ್ಶನ ನಾಯಕ್, ವಿದ್ಯಲತಾ ಶೆಟ್ಟಿ, ಸದಸ್ಯ ರೋಹಿತ್ ದೇವಾಡಿಗ ಉಪಸ್ಥಿತರಿದ್ದರು.