×
Ad

ಸಂಸ್ಕೃತದಿಂದ ಸಮರ್ಥ ಭಾರತ ನಿರ್ಮಾಣ ಸಾಧ್ಯ: ಸುರೇಶ್ ಸೋನಿ

Update: 2017-01-07 23:50 IST

ಉಡುಪಿ, ಜ.7: ಸಂಸ್ಕೃತ ಭಾಷೆಯ ಪ್ರಭಾವ ಭಾರತದಲ್ಲಿದೆ. ಸಂಸ್ಕೃತದಲ್ಲಿ ಸಂಸ್ಕೃತಿ ಇದೆ. ದೇಶದಲ್ಲಿ ಸಂಸ್ಕೃತವನ್ನು ಕಲಿಸುವ ಜನಾಂದೋಲನ ಆಗ ಬೇಕು. ಇದರಿಂದ ಸಂಸ್ಕೃತ ಮತ್ತೆ ವೈಭವ ಸ್ಥಾನವನ್ನು ಪಡೆದು ಭಾರತ ಸಮರ್ಥವಾಗುತ್ತದೆ ಎಂದು ಆರ್‌ಎಸ್‌ಎಸ್ ಸಹಸರ ಕಾರ್ಯವಾಹಕ ಸುರೇಶ್ ಸೋನಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಸಂಸ್ಕೃತ ಭಾರತಿಯ ಐದನೆ ಅಖಿಲ ಭಾರತೀಯ ಅಧಿವೇಶನದ ಎರಡನೆ ದಿನವಾದ ಇಂದು ‘ಸಂಸ್ಕೃತ ಭಾರತಂ ಸಮರ್ಥ ಭಾರತಂ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ವೈಜ್ಞಾನಿಕ ಭಾಷೆಯಾಗಿರುವ ಸಂಸ್ಕೃತದಲ್ಲಿ ನಮ್ಮ ಧ್ಯೇಯವನ್ನು ಸಾಧಿಸಲು ಸಾಧ್ಯ. ಭಾರತೀಯ ಸಂಸ್ಕೃತಿಯನ್ನು ಪುನರ್ ಸ್ಥಾಪಿಸಬೇಕಾಗಿದೆ. ಅದರ ಶ್ರೇಷ್ಠತೆಯನ್ನು ಜಗತ್ತಿನ್ನೆಲ್ಲೆಡೆ ಪಸರಿಸಬೇಕು. ಭ್ರಷ್ಟಾಚಾರ, ಅತ್ಯಾಚಾರ, ಅನಾಧಾರ ರಾಜಕಾರಣಗಳನ್ನು ಮಾಡಬಾರದೆಂದು ವೇದಗಳು ಹೇಳುತ್ತವೆ. ಆದರೆ ನಾವು ಅದನ್ನು ಅಳವಡಿಸಿಕೊಂಡಿಲ್ಲ. ಕಾರಣ ವೇದಗಳು ಕೆಲವರಿಗೆ ಮಾತ್ರ ಸೀಮಿತವಾದುದು ಎಂಬುದಾಗಿ ನಾವು ಭಾವಿಸಿದ್ದೇವೆ. ರಾಜಕೀಯ ಕ್ಷೇತ್ರದಲ್ಲಿ ವೇದವನ್ನು ಅಧ್ಯಯನ ಮಾಡಿದವರು ವಿರಳ. ಹಾಗಾಗಿ ಅವರಿಗೆ ಸಂಸ್ಕೃತ ಭಾಷೆಯ ಸಾಹಿತ್ಯ, ವೇದದಲ್ಲಿ ಅಡಗಿರುವ ವಿಷಯಗಳನ್ನು ತಿಳಿಸ ಬೇಕಾಗಿದೆ. ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀ ಆಶೀರ್ವಚನ ನೀಡಿ, ಸಂಸ್ಕೃತ ಭಾಷೆಯ ಪುನರುತ್ಥಾನದಿಂದ ಸಮೃದ್ಧ ಭಾರತ ನಿರ್ಮಿಸಲು ಸಾಧ್ಯ. ಭಾರತ ಸಮರ್ಥವಾಗಬೇಕಾದರೆ ಇಲ್ಲಿನ ಸನಾತನ ಧರ್ಮ ಪುನರುತ್ಥಾನವಾಗಬೇಕು. ಸಂಸ್ಕೃತ ಭಾಷೆಯು ವಿಶೇಷ ಜ್ಞಾನ, ಜೀವನ, ವಿಜ್ಞಾನ, ಸಂಸ್ಕೃತಿಯನ್ನು ನೀಡುತ್ತದೆ. ಇಂದು ವಿದೇಶಿಯರು ನಮ್ಮ ದೇಶದ ಸಂಸ್ಕೃತಿಯನ್ನು ತಿಳಿಯಲು ಸಂಸ್ಕೃತವನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News