ಎಲ್ಲ ಕ್ಷೇತ್ರಗಳಲ್ಲೂ ಅಸಹಿಷ್ಣುತೆ: ಸಮ್ಮೇಳನಾಧ್ಯಕ್ಷೆ ಡಾ.ಮಾಧವಿ ಕಳವಳ

Update: 2017-01-07 18:54 GMT

ಉಡುಪಿ, ಜ.7: ಇಂದು ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಸಹಿಷ್ಣುತೆ ಹೊಗೆಯಾಡುತ್ತಿದೆ. ತಲೆತಲಾಂತರದಿಂದ ಬಂದಿರುವ ಸಾಮರಸ್ಯ ನಗೆಪಾಟಲಿಯ ವಿಷಯವಾಗುತ್ತಿರುವ ಬಗ್ಗೆ ಆತಂಕ ಕಾಡುತ್ತಿದೆ ಎಂದು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ, ಸಾಹಿತಿ ಡಾ.ಮಾಧವಿ ಎಸ್.ಭಂಡಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಸಾಪ ಮತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಶನಿವಾರ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ಆಯೋಜಿಸಲಾದ 10ನೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಆಮಿರ್ ಖಾನ್, ಶಾರುಕ್ ಖಾನ್ ಸಿನೆಮಾ ಬಹಿಷ್ಕಾರ ಅವರೊಬ್ಬರ ಹೊಟ್ಟೆಗೆ ಹೊಡೆಯುವುದಿಲ್ಲ. ಅವರೊಂದಿಗೆ ತೊಡಗಿಸಿಕೊಂಡಿರುವ ಎಲ್ಲ ಜಾತಿ ಮತಗಳ ಕಾರ್ಮಿಕರ ತುತ್ತನ್ನೇ ಕಸಿಯುವಂತಾಗುತ್ತದೆ. ನೀರು ಹಾಗೂ ಗಡಿ ಸಮಸ್ಯೆಯ ಹೆಸರಿನಲ್ಲಿ ನೆರೆ ರಾಜ್ಯಗಳ ವಿರುದ್ಧ ಪ್ರತಿಭಟನೆ ಹಾಗೂ ಸರಕಾರಿ ಸೊತ್ತುಗಳ ಧ್ವಂಸ ಮಾಡಲಾಗುತ್ತಿದೆ. ಹೀಗೆ ನಾವು ತಾಳ್ಮೆ, ಸಹಿಷ್ಣುತೆಯನ್ನು ಮರೆಯುತ್ತಿದ್ದೇವೆ ಎಂದರು.

ಎಲ್ಲ ಮತ ಧರ್ಮಗಳು ತಮ್ಮ ತಮ್ಮ ವಲಯ ವರ್ತುಲಗಳಲ್ಲಿದ್ದರೆ ನಮ್ಮ ದೇವರು ಶ್ರೇಷ್ಠ, ಇತರರ ದೇವರು ಕನಿಷ್ಠ ಎಂಬ ಮಾತುಗಳು ಬರುವುದಿಲ್ಲ. ಅಪನಂಬಿಕೆಗಳು ನಂಬಿಕೆಗಳನ್ನು ಮೆಟ್ಟಿ ನಿಲ್ಲುವುದಿಲ್ಲ. ದೇವರನ್ನು ಬೀದಿಗೆ ತಂದಾಗ ಮಾತ್ರವೇ ಬೀದಿ ರಂಪಗಳು ಆರಂಭವಾಗುವುದು ಎಂದರು.

ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದರ ಪರಿಣಾಮ ಇಂದು ಪುರುಷ-ಸೀಯರ ಲಿಂಗಾನುಪಾತ 2011ರ ಜನಗಣತಿ ಪ್ರಕಾರ ದೇಶದಲ್ಲಿ 1000:918 ಮತ್ತು ಕರ್ನಾಟಕದಲ್ಲಿ 1000:943 ಆಗಿದೆ. ಸೀಯ ಮೈಮಾಟ ಅವಳ ಅರಿವಿಗೆ ಬಾರದ ರೀತಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆ ಸರಕಾಗಿ ಮಾರ್ಪಾ ಡಾಗುತ್ತಿದೆ ಎಂದು ಟೀಕಿಸಿದರು.

ಸೀವಾದ ಪುರುಷ ದ್ವೇಷಿಯಲ್ಲ. ಅತ್ಯಾಚಾರ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಲೇಬೇಕು. ಮುಂದೆ ಅಂಥವರಿಗೆ ಅದು ಪಾಠವಾಗಬೇಕು. ಮಹಿಳಾ ಪರ ಕಾನೂನುಗಳ ಸದ್ಬಳಕೆ ಮಾಡಿಕೊಂಡು ಮಹಿಳೆಯರು ತಮ್ಮ ರಕ್ಷಣೆ ಮಾಡಿಕೊಳ್ಳುವಂತಾಗಬೇಕು. ಹಾಗಾದಾಗ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸಾಧ್ಯ ಎಂದರು.

ಮನಸ್ಸನ್ನು ಅರಳಿಸುವ ಮುದ ನೀಡುವ ಒಳ್ಳೆಯ ಸಾಹಿತ್ಯ ನಮಗೆ ಬೇಕು. ಮಕ್ಕಳ ಬುದ್ಧಿಗೊಂದಿಷ್ಟು ಗ್ರಾಸವನ್ನೊದಗಿಸುವ ಸಾಹಿತ್ಯಬೇಕಿದೆ. ಮಾತೃಭಾಷೆಯನ್ನು ಕಲಿಸದೆ ಪ್ರಾದೇಶಿಕ ಪರಿಸರದ ಭಾಷೆಯಲ್ಲಿ ಶಿಕ್ಷಣವನ್ನು ಕೊಡಿಸದೆ ಮಕ್ಕಳನ್ನು ನಾವು ಗಿಳಿಗಳಂತೆ ಸಾಕುತ್ತಿದ್ದೇವೆ. ಮಕ್ಕಳನ್ನು ನಾವು ಸಾಧನ ಶೂನ್ಯ ಹಂತಕ್ಕೆ ನೂಕುತ್ತಿದ್ದೇವೆ. ಸರಕಾರಗಳು ಕನ್ನಡ ಬೆಳೆಯಬೇಕೆಂದು ಹೇಳುತ್ತ ಆಂಗ್ಲ ಮಾಧ್ಯಮ ಶಾಲೆಗಳನ್ನು ಪೋಷಿಸುತ್ತಿವೆ ಎಂದವರು ಖೇದ ವ್ಯಕ್ತಪಡಿಸಿದರು.

ಸಮ್ಮೇಳನವನ್ನು ಚುಟುಕ ಕವಿ ಡುಂಡಿರಾಜ್ ಉದ್ಘಾಟಿಸಿ, ಸಾಹಿತ್ಯ ಎಂಬುದು ಸುಸಂಸ್ಕೃತ ಮನುಷ್ಯನ ಎಲ್ಲ ಕಾಲದ ಅಗತ್ಯ ಬೇಡಿಕೆಯಾಗಿದೆ. ಭಾಷೆಯಲ್ಲಿ ಸಾಹಿತ್ಯಿಕವಾದ ಶಕ್ತಿಯಿದೆ. ಸಮ್ಮೇಳನಗಳನ್ನು ಭೋಜನ, ಮೆರವಣಿಗೆ, ಸನ್ಮಾನಗಳಿಗೆ ಮಾತ್ರ ಸೀಮಿತಗೊಳಿಸದೆ ವಿಚಾರ ಮಂಡನೆಗೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ಸಮ್ಮೇಳನಗಳ ಸ್ವರೂಪವನ್ನು ಅರ್ಥಪೂರ್ಣ ಗೊಳಿಸಬೇಕು ಎಂದರು.

ಪ್ರಸ್ತುತ ಸಾಹಿತ್ಯ ಎಂಬುದು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದು ಬೇರೆ ಬೇರೆ ರೂಪಗಳಿಗೆ ರೂಪಾಂತರಗೊಂಡಿದೆ. ಬ್ಲಾಗ್, ಸಾಮಾಜಿಕ ಜಾಲ ತಾಣಗಳಲ್ಲಿಯೂ ಸಾಹಿತ್ಯವನ್ನು ಕಾಣಬಹುದಾಗಿದೆ. ಪುಸ್ತಕ ಮಾರಾಟವಾಗಿಲ್ಲ ಎಂಬ ಕಾರಣಕ್ಕೆ ಸಾಹಿತ್ಯ ಇಲ್ಲ ಎಂಬುದಾಗಿ ಅರ್ಥೈಸಿಕೊಳ್ಳಬಾರದು ಎಂದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಯಶ್ಪಾಲ್ ಸುವರ್ಣ, ವಾರ್ತಾಕಾರಿ ರೋಹಿಣಿ, ಅಜ್ಜರ ಕಾಡು ಮಹಿಳಾ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಜಗದೀಶ್ ರಾವ್, ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕೆ., ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.ಗೋಪಾಲ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಸಾಪ ಗೌರವ ಕಾರ್ಯದರ್ಶಿಗಳಾದ ಸೂರಾಲು ನಾರಾಯಣ ಮಡಿ, ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧ್ಯಕ್ಷ ವೆಲೇರಿಯನ್ ಮೆನೇಜಸ್ ಉಪಸ್ಥಿತರಿದ್ದರು.

ಕಸಾಪ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಸ್ವಾಗತಿಸಿದರು. ಅಲ್ತಾರ್ ನಾಗರಾಜ್ ವಂದಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News