ಹತ್ಯೆಗೀಡಾಗಿದ್ದ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ತಾಯಿ ನಿಧನ
ಮಂಗಳೂರು, ಜ. 8: ಮಾರ್ಚ್ 21ರಂದು ಹತ್ಯೆಗೀಡಾದ ವಿನಾಯಕ ಪಾಂಡುರಂಗ ಬಾಳಿಗಾ ಅವರ ತಾಯಿ ಲಕ್ಷ್ಮೀ ಬಾಳಿಗಾ ( 82) ಅವರು ಇಂದು ನಿಧನರಾದರು.
ಶನಿವಾರ ಕುಸಿದು ಬಿದ್ದು ತಲೆಗೆ ಏಟಾಗಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾಗಿದ್ದಾರೆ.
ಅವರು ಪತಿ ಬಿ.ರಾಮಚಂದ್ರ ಬಾಳಿಗಾ ಹಾಗೂ ನಾಲ್ವರು ಪುತ್ರಿಯರಾದ ಶ್ವೇತಾ, ಆಶಾ, ಅನು ಮತ್ತು ಹರ್ಷಾರನ್ನು ಅಗಲಿದ್ದಾರೆ.
ಲಕ್ಷ್ಮೀ ಬಾಳಿಗಾ ಅವರು ತಮ್ಮ ಏಕೈಕ ಪುತ್ರ ವಿನಾಯಕ ಬಾಳಿಗಾರ ಹತ್ಯೆಯಾದಂದಿನಿಂದ ಅವರು ಖಿನ್ನತೆಗೊಳಗಾಗಿದ್ದರು. ವಿನಾಯಕ ಬಾಳಿಗಾರರನ್ನು ಅವರ ನಿವಾಸದ ಬಳಿಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಲಕ್ಷ್ಮೀ ಬಾಳಿಗಾ ಅವರು ಪತಿ ಬಿ.ರಾಮಚಂದ್ರ ಬಾಳಿಗಾರೊಂದಿಗೆ ತಮ್ಮ ಪುತ್ರನ ಹಂತಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಾಗೂ ನ್ಯಾಯಕ್ಕಾಗಿ ನಿರಂತರ ಹೋರಾಟವನ್ನು ನಡೆಸುತ್ತಿದ್ದರು.
ಇದೀಗ ಲಕ್ಷ್ಮೀ ಬಾಳಿಗಾರ ಅಗಲಿಕೆಯಿಂದ ಬಾಳಿಗಾ ಕುಟುಂಬಕ್ಕೆ ಇನ್ನೊಂದು ಆಘಾತವಾಗಿದೆ.