ಕಾಪು ತಾಲ್ಲೂಕು ರಚನೆಗೆ ಒತ್ತಾಯ : ಎರಡನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ
ಕಾಪು, ಜ.8 : ಕಾಪು ತಾಲೂಕು ಕೇಂದ್ರವಾಗಿ ಗುರತಿಸಿಕೊಳ್ಳಬೇಕು ಎಂದು ಆಗ್ರಹಿಸಿ ಕಾಪು ತಾಲ್ಲೂಕು ಹೋರಾಟ ಸಮಿತಿಯ ವತಿಯಿಂದ ನಡೆಯುತ್ತಿರುವ ಜಾಥಾ ಎರಡನೇ ದಿನದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿನಯಕುಮಾರ್ ಸೊರಕೆ, ತಾಲೂಕು ರಚನೆಯ ಹೋರಾಟ ಸರ್ವ ಜನರ ಕೂಗಾಗಬೇಕು. ಉತ್ತರಕನ್ನಡ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರದಲ್ಲಿ 11 ತಾಲೂಕುಗಳಿವೆ. ಬ್ರಿಟಿಷರ ಕಾಲದಲ್ಲಿಯೇ ಕಾಪುವಿನಲ್ಲಿ ಕಂದಾಯ ಹೋಬಳಿ, ಬಿಡಿಒ ಕಚೇರಿ ಹೊಂದಿತ್ತು. ಬೈಂದೂರು ಹಾಗೂ ಬ್ರಹ್ಮಾವರಗಳಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಆರಂಭಿಸಲಾಗಿದೆ. ಹಿಂದಿನ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನೊಳಗೊಂಡು ತಾಲೂಕು ರಚನೆಯಾಗಬೇಕು. ಇದಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕು. ಹೋರಾಟ ಸಮಿತಿಯಿಂದ ಎಲ್ಲಡೆ ಜನಜಾಗೃತಿ ನಡೆಯುತ್ತಿದೆ ಎಂದರು.
ತಾಲ್ಲೂಕು ಪಂಚಾಯತಿ ಸದಸ್ಯ ಯು.ಸಿ.ಶೇಖಬ್ಬ, ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಉಸ್ಮಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಸಮಾಜ ಸೇವಕ ಲೀಲಾಧರ ಶೆಟ್ಟಿ, ನವೀನ್‌ಚಂದ್ರ ಜೆ.ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾಪು ಬ್ಲಾಕ್ ದಕ್ಷಿಣ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಉತ್ತರ ಅಧ್ಯಕ್ಷ ಸುಧೀರ್ ಹೆಗ್ಡೆ, ದೀಪಕ್ ಎರ್ಮಾಳ್, ವಿಶ್ವಾಸ್ ಅಮೀನ್ ದಿವಾಕರ ಶೆಟ್ಟಿ ಕಾಪು, ಗ್ರಾ.ಪಂ. ಅಧ್ಯಕ್ಷರಾದ ದಮಯಂತಿ ಅಮೀನ್, ಹನೀಫ್ ಕನ್ನಂಗಾರ್, ಜೀತೇಂದ್ರ ಪುಟಾರ್ಡೋ, ಅಬ್ದುಲ್ಲಾ, ಅಬ್ದುಲ್ ಅಝೀರ್ ಹೆಜಮಾಡಿ, ಮತ್ತಿತರರು ಉಪಸ್ಥಿತರಿದ್ದರು.
ಶನಿವಾರ ಹೆಜಮಾಡಿಯಲ್ಲಿ ಆರಂಭಗೊಂಡ ಪಾದಯಾತ್ರೆ ರಾಹೆ ಮೂಲಕ ಪಡುಬಿದ್ರಿ, ಎರ್ಮಾಳು, ಉಚ್ಚಿಲ ಮೂಲಕ ಕಾಪು ತಲುಪಿತು.
ಕಾಪುವಿನಲ್ಲಿ ಬೆಳಗ್ಗೆ ಜನಾರ್ಧನ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಪಾದಯಾತ್ರೆ ರಾಹೆ ಪಾಂಗಾಳ, ಕಟಪಾಡಿ ಮೂಲಕ ಉದ್ಯಾವರ ತಲುಪಿತು.
ಉದ್ಯಾವರದಲ್ಲಿ ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.
ಹೆಜಮಾಡಿಯಿಂದ ಉದ್ಯಾವರದವರೆಗೆ ಸುಮಾರು 23ಕಿಮೀ ನಷ್ಟು ನಡೆದ ಪಾದಯಾತ್ರೆಯಲ್ಲಿ ಶಾಸಕ ವಿನಯಕುಮಾರ್ ಸೊರಕೆಯವರು ಭಾಗವಹಿಸಿದ್ದು, ಅವರಿಗೆ ಹೋರಾಟದ ನೇತೃತ್ವ ವಹಿಸಿದ ಲೀಲಾಧರ ಶೆಟ್ಟಿಯವರು ಮತ್ತಿತರ ನಾಯಕರು ಸಾಥ್ ನೀಡಿದರು.
ಪಾದಯಾತ್ರೆಯ ಉದ್ದಕ್ಕೂ ನೀರು, ಕಿತ್ತಲೆ, ಮಜ್ಜಿಗೆಯನ್ನು ವಿತರಿಸಲಾಯಿತು.