ನೋಟು ಅಮಾನ್ಯೀಕರಣದಿಂದ ಸಂಗ್ರಹಿತ ಹಣ : ಆರೋಗ್ಯ, ಶಿಕ್ಷಣ, ಬಡವರಿಗಾಗಿ ವಿನಿಯೋಗ
ಉಡುಪಿ, ಜ.8:ನೋಟು ಅಮಾನ್ಯೀಕರಣದ ಬಳಿಕ ಸರಕಾರದ ಬಳಿ ಸಂಗ್ರಹಿತವಾದ ಹಣವನ್ನು ದೇಶದ ಜನತೆಗೆ ಆರೋಗ್ಯ, ಶಿಕ್ಷಣ ಸೇವೆಯನ್ನು ನೀಡಲು ಹಾಗೂ ಬಡವರ ಏಳಿಗೆಗೆ ಬಳಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಉಡುಪಿ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಸಂಸ್ಕೃತ ಭಾರತಿಯ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿರುವ ಅಖಿಲ ಭಾರತೀಯ ಸಂಸ್ಕೃತ ಅಧಿವೇಶನದ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೂ ಹಣದ ಕೊರತೆ ಇಲ್ಲ ಎಂದವರು ನುಡಿದರು.
ನಾವು ದೇಶದ-ವಿಶ್ವದ ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಭಾಷೆ ಎಂಬುದು ಮನುಷ್ಯರ ನಡುವೆ ಸಂವಹನ ಸಾಧನವಾಗಿದೆ. ಎಲ್ಲಾ ಭಾಷೆಗಳಿಗೂ ಪ್ರೋತ್ಸಾಹ ಸರಕಾರದ ಗುರಿಯಾಗಿದೆ. ಸಂಸ್ಕೃತ ಎಲ್ಲಾ ಭಾಷೆಗಳಿಗೂ ಮಾತೃ ಸ್ವರೂಪಿಯಾಗಿದೆ ಎಂದು ಹೇಳಿದ ಜಾವಡೇಕರ್, ಸಂಸ್ಕೃತವನ್ನು ಕೇವಲ ಭಾಷೆಯ ದೃಷ್ಟಿಯಿಂದ ದೇಶದ ಏಳಿಗೆಯ ದೃಷ್ಟಿಯಿಂದಲೂ ಜನಸಾಮಾನ್ಯರ ನಡುವೆ ಪಸರಿಸುವ ಅಗತ್ಯವಿದೆ ಎಂದರು.
ಇತ್ತೀಚೆಗೆ ದೇಶದ ತ್ರಿಭಾಷಾ ಸೂತ್ರದ ಕುರಿತು ಚರ್ಚೆ ನಡೆಯುತ್ತಿದೆ. ಕೊಠಾರಿ ಆಯೋಗವೂ ಈ ಕುರಿತಂತೆ ವರದಿಯನ್ನು ನೀಡಿದೆ. ಸಿಬಿಎಸ್‌ಸಿ ಯಲ್ಲಿ ಕೇವಲ ದೇಶದ ಭಾಷೆಗಳು ಮಾತ್ರವಲ್ಲ, ವಿದೇಶಿ ಭಾಷೆಗಳ ಅಧ್ಯಯನಕ್ಕೆ ಅವಕಾಶಗಳಿವೆ. ತ್ರಿಭಾಷಾ ಸೂತ್ರವೆಂದರೆ ಅದು ಕೇವಲ ಭಾರತೀಯ ಭಾಷೆ ಮಾತ್ರ ಆಗಿರಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಸಂಸ್ಕೃತವನ್ನು ಆಯ್ಕೆ ಮಾಡಬಹುದು ಎಂದರು.
ಭಾಷೆ ಜೀವನವನ್ನು ಸಮೃದ್ಧಗೊಳಿಸುತ್ತದೆ. ಸಂಸ್ಕೃತ ಭಾರತಿ, ಭಾರತದ ಪ್ರಾದೇಶಿಕ ಭಾಷೆಗಳು ಹಾಗೂ ಸಂಸ್ಕೃತದ ಡಿಕ್ಷೆನರಿಯನ್ನು ಹೊರತರಬೇಕು ಎಂದ ಸಚಿವರು, ನಾವು ಯಾವುದೇ ಭಾಷೆಯ ಧ್ವೇಷಿಗಳಾಗಬಾರದು ಎಂದರು.
ಇಂದು ವಿಶ್ವದಲ್ಲಿ ಹಿಬ್ರು ಭಾಷೆಯನ್ನು ಆಡುವವರು ಯಾರೂ ಇಲ್ಲವಾದರೂ, ಇಸ್ರೇಲ್‌ನಲ್ಲಿ ಹಿಬ್ರು ಭಾಷೆಯ ಸಾಹಿತ್ಯ, ಪಠ್ಯಪುಸ್ತಕಗಳು ಲಭ್ಯವಿದೆ. ಅದೇ ರೀತಿ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲೂ ಪಠ್ಯಪುಸ್ತಕ, ಕಲಿಕೆ ಸಾಮಗ್ರಿ ತಯಾರಾಗದ ಹೊರತು ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ಭಾರತೀಯ ಭಾಷೆಯ ವಿಕಾಸದಲ್ಲಿ ದೇಶದ ವಿಕಾಸ ಅಡಗಿದೆ ಎಂದು ಅಭಿಪ್ರಾಯಪಟ್ಟರು.
ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಡಾ.ನವೀನ ಹೊಳ್ಳ ಅವರು ರಚಿಸಿದ ‘ಗುರು ತತ್ವ ದೀಪಿಕಾ’ ಕೃತಿಯನ್ನು ಸಚಿವ ಪ್ರಕಾಶ್ ಜಾವಡೇಕರ್ ಲೋಕಾರ್ಪಣೆಗೊಳಿಸಿದರು.
ಮಹೇಶ್ ಕಾಕತ್ಕರ್ ಕೃತಿ ಪರಿಚಯ ಮಾಡಿದರು.
ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಕೃತ ಭಾರತಿಯ ರಾಷ್ಟ್ರೀಯ ಸಂಚಾಲಕ ಭಕ್ತವತ್ಸಲಂ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ಉಪಸ್ಥಿತರಿದ್ದರು.
ಸಂಸ್ಕೃತ ಭಾರತಿ ಉತ್ತರಖಂಡದ ಅಧ್ಯಕ್ಷ ಡಾ.ಬುದ್ಧದೇವ್ ಶರ್ಮ ಅತಿಥಿಗಳನ್ನು ಸ್ವಾಗತಿಸಿದರು, ಡಾ.ಬೃಹಸ್ಪತಿ ಮಿಶ್ರಾ ವಂದಿಸಿದರು.