ಅಂಗರಗುಂಡಿ ಸರಕಾರಿ ಶಾಲೆಗೆ ಶಾಸಕ ಮೊಯ್ದಿನ್ ಬಾವಾ ಭೇಟಿ
ಮಂಗಳೂರು, ಜ.8: ದುರಸ್ತಿ ಅಗತ್ಯವಿರುವ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಬಿ.ಎ. ಮೊಯ್ದಿನ್ ಬಾವಾ ತಿಳಿಸಿದ್ದಾರೆ.
ಬೈಕಂಪಾಡಿಯ ಅಂಗರಗುಂಡಿ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಈಗಾಗಲೇ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳ ದುರಸ್ತಿ ಮತ್ತು ತುರ್ತು ನಿರ್ವಹಣೆಗೆ ಲಭಿಸಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಶಾಲೆಯ 8 ಕೊಠಡಿಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಭಾಗದ ಕೈಗಾರಿಕೋದ್ಯಮಿಗಳ ನೆರವಿನಿಂದ ಶಾಲಾ ಕಟ್ಟಡದ ನೆಲಮಹಡಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೊಯ್ದಿನ್ ಬಾವಾ ಹೇಳಿದರು.
ಇಂಗ್ಲಿಷ್ ಮಾಧ್ಯಮದ ಪ್ರಭಾವದ ನಡುವೆಯೂ ಅಂಗರಗುಂಡಿ ಸರಕಾರಿ ಶಾಲೆಯಲ್ಲಿ 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿಯುತ್ತಿರುವುದಕ್ಕೆ ಶಾಸಕರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಅಂಗರಗುಂಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರವಿಕಲಾ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಇಲ್ಯಾಸ್, ಮನ್ಸೂರ್ ಮತ್ತಿತರರು ಉಪಸ್ಥಿತರಿದ್ದರು.