ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಾರ್ಕಳದ ಎಂ.ರಾಮಚಂದ್ರ ಆಯ್ಕೆ
ಉಡುಪಿ, ಜ.8: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘದ ಆಶ್ರಯದಲ್ಲಿ 11ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ.13ರಿಂದ 15ರವರೆಗೆ ಮೂರು ದಿನಗಳ ಕಾಲ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಜರಗಲಿದೆ.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು. ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಲೇಖಕ, ಸಾಹಿತ್ಯ ಸಂಘಟಕ, ಕಾರ್ಕಳಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಂ.ರಾಮಚಂದ್ರ ಆಯ್ಕೆಯಾಗಿದ್ದಾರೆ ಎಂದವರು ತಿಳಿಸಿದರು.
ಸಮ್ಮೇಳನವನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಬೆಳಗ್ಗೆ 11:00ಗಂಟೆಗೆ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಪುಸ್ತಕ ಮಳಿಗೆಯನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ವಸ್ತು ಪ್ರದರ್ಶನವನ್ನು ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಯೋಜಿಸಲಾದ ವೈದ್ಯಕೀಯ ಶಿಬಿರವನ್ನು ಜಿಲ್ಲಾ ವೈದ್ಯಾಧಿಕಾರಿ ಡಾ.ರೋಹಿಣಿ ಉದ್ಘಾಟಿಸಲಿದ್ದಾರೆ.
ಇದಕ್ಕೆ ಮುನ್ನ ಬೆಳಗ್ಗೆ 9 ಗಂಟೆಗೆ ಜಿಪಂ ಅಧ್ಯಕ್ಷ ದಿನಕರ ಬಾಬು ಧ್ವಜಾರೋಹಣ ಮಾಡಲಿದ್ದು , ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆಗೆ ಬಿರ್ತಿ ರಾಜೇಶ್ ಶೆಟ್ಟಿ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಪುಸ್ತಕಗಳನ್ನು ರಾಜ್ಯ ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸುವರು. ಅಪರಾಹ್ನ ವಿದ್ಯಾರ್ಥಿಗಳ ಕವಿಗೋಷ್ಠಿ, ಮಕ್ಕಳವಿಚಾರಗೋಷ್ಠಿಗಳು ನಡೆಯಲಿವೆ. ಕಳೆದ ವರ್ಷ ಎಸ್ಸೆಸೆಲ್ಸಿ ಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು ಗೌರವಿಸಲಾಗುವುದು ಎಂದು ಅಡಿಗ ತಿಳಿಸಿದರು.
ಸಮ್ಮೇಳನದ ಎರಡನೇ ದಿನದಂದು ಮಾಧ್ಯಮ ಗೋಷ್ಠಿ, ಮಹಿಳಾ ಗೋಷ್ಠಿ, ಯುವ ಕವಿ ಗೋಷ್ಠಿ, ಹಾಸ್ಯ ಗೋಷ್ಠಿ, ಯಕ್ಷಗಾನ ಸಾಹಿತ್ಯ ಗೋಷ್ಠಿಗಳು ನಡೆಯಲಿವೆ. ಪಿಪಿಸಿಯ ಕನ್ನಡ ಉಪನ್ಯಾಸಕ ಡಾ.ಶ್ರೀಕಾಂತ ಸಿದ್ಧಾಪುರ ಮಟಪಾಡಿ ರಾಜಗೋಪಾಲ ಆಚಾರ್ಯ ಸಂಸ್ಮರಣೆ ಮಾಡಲಿದ್ದಾರೆ. ಅದೇ ದಿನ ವಿವಿಧ ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು.
ಕೊನೆಯ ದಿನದಂದು ಕುಂದಗನ್ನಡದ ಗೋಷ್ಠಿ, ಕನ್ನಡ ಭಾಷೆ ಮತ್ತು ತಂತ್ರಜ್ಞಾನ ಗೋಷ್ಠಿ, ಅಪರಾಹ್ನ 12:00ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 2:00ಕ್ಕೆ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರಿಂದ ಬೈಕಾಡಿ ವೆಂಕಟಕೃಷ್ಣ ರಾಯರ ಸಂಸ್ಮರಣೆ ನಡೆಯಲಿದೆ. 2:30ಕ್ಕೆ ಬಹಿರಂಗ ಅಧಿವೇಶನ, 3:15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಪಾದೇಕಲ್ಲು ವಿಷ್ಣು ಭಟ್ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು.
ಸಮ್ಮೇಳನಕ್ಕೆ ಮೊದಲು ಕಾರ್ಕಳ, ಕುಂದಾಪುರ ಹಾಗೂ ಉಡುಪಿ ತಾಲೂಕಿನಾದ್ಯಂತ ಕನ್ನಡ ಭುವನೇಶ್ವರಿ ರಥಯಾತ್ರೆ ನಡೆಯಲಿದೆ. ಸಮ್ಮೇಳನ ದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟವೂ ನಡೆಯಲಿದೆ. ಬ್ರಹ್ಮಾವರದ ಸೌತ್ ಕೆನರಾ ಪೋಟೊಗ್ರಾಫರ್ಸ್ ಸಂಘದಿಂದ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಪ್ರತಿದಿನ ಕನ್ನಡ ನಗೆ ನಾಟಕ, ಯಕ್ಷಗಾನ, ಸುಗಮ ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುರೇಂದ್ರ ಅಡಿಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೂರಾಲು ನಾರಾಯಣ ಮಡಿ, ಪ್ರಶಾಂತ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಹಂದಾಡಿ ಮೋಹನ ಉಡುಪ, ಅಶೋಕ ಭಟ್ ಮುಂತಾದವರು ಉಪಸ್ಥಿತರಿದ್ದರು.