ರಾಜಕೀಯ ಅಧಿಕಾರ ಪಡೆಯಲು ಧರ್ಮದ ಬಳಕೆಯಿಂದ ಕೋಮುವಾದದ ಬೇಳವಣಿಗೆ ಆಗಿದೆ -ಪ್ರೊ.ಸುರೇಂದ್ರ ರಾವ್
ಮಂಗಳೂರು,ಜ.8:ರಾಜಕೀಯ ಅಧಿಕಾರ ಪಡೆಯಲು ಧರ್ಮವನ್ನು ಬಂಡವಾಳವಾಗಿ ಬಳಸಿಕೊಳ್ಳುತ್ತಿರುವುದು ಕರಾವಳಿಯಲ್ಲಿ ಕೋಮುವಾದದ ಬೆಳೆಯಲು ಒಂದು ಪ್ರಮುಖ ಕಾರಣವಾಗಿದೆ ಎಂದು ಇತಿಹಾಸ ತಜ್ಞ, ಚಿಂತಕ ಪ್ರೊ.ಸುರೇಂದ್ರರಾವ್ ತಿಳಿಸಿದ್ದಾರೆ.
ಮಾಜಿ ಶಾಸಕ ಕಾ.ಕೃಷ್ಣ ಶೆಟ್ಟಿಯವರ ಬಗೆಗಿನ ಜನಮನಗೆದ್ದ ನಾಯಕ ಪುಸ್ತಕ ಹಾಗೂ ಸೌಹಾರ್ದ ಕರ್ನಾಟಕ -60 ಜನಶಕ್ತಿ ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಾತಿ ಪ್ರಜ್ಞೆ,ಧರ್ಮ ಪ್ರಜ್ಞೆಯೊಂದಿಗೆ ಬೆಳೆದು ಬಂದ (ಐಡೆಂಟಿಟಿ ಪೊಲಿಟಿಕ್ಸ್) ರಾಜಕೀಯ ಪ್ರಜ್ಞೆ ರಾಜಕೀಯ ಅಧಿಕಾರ ಪಡೆಯಲು ಬಳಕೆಯಾಗುತ್ತಿದೆ. ಒಂದು ಧರ್ಮದ ಅನುಯಾಯಿಗಳು ಇನ್ನೊಂದು ಧರ್ಮವನ್ನು ಅರ್ಥಮಾಡಿಕೊಳ್ಳದೆ, ತಮ್ಮ ಧರ್ಮವೇ ಶ್ರೇಷ್ಠ ಎನ್ನುವ ಭಾವನೆ ಹೊಂದಿದ್ದರೆ,ಇನ್ನೊಂದು ಧರ್ಮದ ಬಗ್ಗೆ ಅಸಹನೆ ಹೊಂದಿರುವ ಮನೋಸ್ಥಿತಿ ಹೊಂದಿರುವುದು ಕೋಮುವಾದ ಬೆಳೆಯಲು ಕಾರಣವಾಗುತ್ತದೆ . ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ 60 ಜನಶಕ್ತಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲು ಸಂತೋಷ ಪಡುವುದಾಗಿ ಸುರೇಂದ್ರರಾವ್ ಶುಭ ಹಾರೈಸಿದರು.
ರಾಜಕೀಯದಲ್ಲಿ ಜಾತಿ,ಧರ್ಮದ ಬಳಕೆಯಿಂದ ಬಡವ ಶ್ರೀಮಂತರ ಅಂತರ ಹೆಚ್ಚಾಗಿದೆ:
ರಾಜಕೀಯದಲ್ಲಿ ಜಾತಿ ಧರ್ಮಗಳ ಬಳಕೆಯಿಂದ ಏನಾಗಿದೆ ಎನ್ನುವುದನ್ನು ಗಮನಿಸಿದಾಗ ಬಡವ -ಶ್ರೀಮಂತರ ನಡುವೆ ಹಾಗೂ ಸಾಮಾಜಿಕ ಸ್ಥಾನ ಮಾನದಲ್ಲಿ ಮೇಲು ಕೀಳು ಎನ್ನುವ ಶ್ರೇಣಿಕೃತ ವ್ಯವಸ್ಥೆ ಸೃಷ್ಟಿಯಾಗಿದೆ ಎಂದು ಎ.ಕೃಷ್ಣ ಶೆಟ್ಟಿ ಜನಮನ ಗೆದ್ದ ನಾಯಕ ಪುಸ್ತಕ ಬಿಡುಗಡೆಗೊಳಿಸಿ ಚಿಂತಕ ಪ್ರೊ.ಚಂದ್ರಪೂಜಾರಿ ಮಾತನಾಡಿದರು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುವುದು ತಪ್ಪು ಎಂದು ಹೇಳಿದೆ. ರಾಜಕೀಯದಲ್ಲಿ ಧರ್ಮದ ಬಳಕೆಯಿಂದ ಏನಾಗಿದೆ ಎನ್ನುವುದನ್ನು ಗಮನಿಸಿದಾಗ ದೇಶದ ಮೂರನೆ ಒಂದರಷ್ಟ ಸಂಪತ್ತು ಕೇವಲ ಶೇ 1ರಷ್ಟು ಶ್ರೀಮಂತರಲ್ಲಿ ಕ್ರೂಢೀಕರಣ ಗೊಂಡಿರುವುದು ಗೋಚರಿಸುತ್ತದೆ. ಇದರಿಂದಾಗಿ ಸಮಾನತೆಯ ಆಶಯ ಮೂಲೆ ಗುಂಪಾಗಿದೆ. ತಳವರ್ಗದ ಜನರ ಸ್ವಾತಂತ್ರ ಹರಣವಾಗಿರುವುದು ಕಂಡು ಬರುತ್ತಿದೆ. ಕರಾವಳಿಯಲ್ಲಿ ಕೋಮುವಾದದ ನೆಲೆಯಲ್ಲಿ ಜನರನ್ನು ಒಡೆದು ಆಳುತ್ತಿರು ಹೆಚ್ಚುತ್ತಿರುವ ಪ್ರಸಕ್ತ ದಿನಗಳಲ್ಲಿ, ಕರಾವಳಿಯ ಸ್ವಾತಂತ್ರ ಹೋರಾಟಗಾರ, ಕಾರ್ಮಿಕ ರೈತ ಚಳವಳಿಯ ಮುಖಂಡ ಎ.ಕೃಷ್ಣ ಶೆಟ್ಟಿಯವರ ಕೃತಿ ಪ್ರಕಟಗೊಂಡಿರುವುದು ಹೆಚ್ಚು ಔಚಿತ್ಯಪೂರ್ಣವಾಗಿದೆ ಎಂದು ಚಂದ್ರಪೂಜಾರಿ ತಿಳಿಸಿದರು.
ಕೃಷ್ಣ ಶೆಟ್ಟಿಯವರ ಜೊತೆ ಎರಡು ದಶಕಗಳಿಗೂ ಹೆಚ್ಚು ಕಾಲ ನಿಕಟ ಒಡನಾಟವಿದ್ದ ಕಾರಣ ಅವರು ರೈತರ,ಚಾಲಗೇಣಿದಾರರ ಪರವಾಗಿ,ಕಾರ್ಮಿಕರ ಪರವಾಗಿ ಹೋರಾಟ ನಡೆಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಜಿಲ್ಲೆಯ ಪ್ರಥಮ ಕಮ್ಯನಿಸ್ಟ್ ಎಂಎಲ್‌ಎ ಆಗಿ ಉಳ್ಳಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.1954ರಲ್ಲಿ ಜಿಲ್ಲೆಯಲ್ಲಿ ಪ್ರಥಮ ರೈತ ಸಮ್ಮೇಳನವನ್ನು ಸಂಘಟಿಸಿದ್ದರು. ನಮ್ಮ ಹೋರಾಟದ ಚಳವಳಿಗೆ ಅವರೇ ಪ್ರೇರಕರಾಗಿದ್ದರು ಎಂದು ಸಿಪಿಎಂನ ಹಿರಿಯ ಮುಖಂಡ ಹಾಗೂ ಕೃಷ್ಣ ಶೆಟ್ಟಿ ಪುಸ್ತಕದ ಲೇಖಕ ಕೆ.ಆರ್.ಶ್ರೀಯಾನ್ ತಿಳಿಸಿದ್ದಾರೆ.
ಕ್ರಿಮಿನಲ್ ಕೃತ್ಯ ಮರೆಮಾಚಲು,ಜನರ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಧರ್ಮ ಜಾತಿಯ ಮುಖವಾಡಗಳನ್ನು ಬಳಸಿಕೊಳ್ಳುವುದು ಅಪಾಯಕಾರಿ ಮತ್ತು ಕೋಮುವಾದಕ್ಕೆ ಕಾರಣವಾಗಿದೆ . ಜನರು ವಿವಿಧ ಧರ್ಮಗಳನ್ನು ತಮ್ಮ ಜೀವನಕ್ರಮಕ್ಕೆ ಅನುಗುಣವಾಗಿ ಬಳಸುವುದರಿಂದ ಸಮಾಜಕ್ಕೆ ಯವೂದೇ ಅಪಾಯವಿಲ್ಲ, ಬದಲಾಗಿ ಧರ್ಮವನ್ನು ರಾಜಕೀಯ ದಾಳವಾಗಿ ಬಳಸುವುದರಿಂದ ಅಪಾಯವಿದೆ ಎಂದು ಸಿಪಿಎಂನ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಜಿ.ಎನ್.ನಾಗರಾಜ್ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡ ವಿ.ಜಿ.ಕೆ.ನಾಯರ್ ಮಾತನಾಡುತ್ತಾ , ಕರಾವಳಿಯಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಬಲ್ಲ ಕಾರ್ಮಿಕ ಮುಖಂಡರಿದ್ದರು . ಅವರ ಪೈಕಿ ಕೃಷ್ಣ ಶಟ್ಟಿಯವರು ಒಬ್ಬರು, ಅದೇ ರೀತಿ ಕರಾವಳಿಯ ಹಿಂದಿನ ಕಾರ್ಮಿಕ ಮುಖಂಡರ ಚರಿತ್ರೆ ಪ್ರಕಟವಾಗಬೇಕಾಗಿದೆ. ಜಿಲ್ಲೆಯಲ್ಲಿ ಕೋಮುವಾದದ ವಿರುದ್ಧ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮುಂದುವರಿಯಬೇಕು ಎಂದು ವಿ.ಜಿ.ಕೆ.ನಾಯರ್ ತಿಳಿಸಿದ್ದಾರೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡುತ್ತಾ, ಕೃಷ್ಣ ಶೆಟ್ಟಿ ಕೋಮುವಾದದ ವಿರುದ್ಧ ,ಕರಾವಳಿಯ ಆರ್ಥಿಕ ಸಾಮಾಜಿಕ ಪರಿವರ್ತನೆಗೆ ಹೋರಾಟ ನಡೆಸಿದ ಶೋಷಿತರ ಧ್ವನಿಯಾಗಿದ್ದ ನಾಯಕರಾಗಿದ್ದರು.ಸ್ವಾತಂತ್ರ ಹೋರಾಟದಲ್ಲಿ ಜೈಲು ಸೇರಿದ ಕೃಷ್ಣ ಶೆಟ್ಟಿ,ಗೋವಾ ವಿಮೋಚನೆಗೆ ಹೋರಾಟ ನಡೆಸಿದವರು ಉಳ್ಳಾಲ ವಲಯದಲ್ಲಿ ಕಾರ್ಮಿಕ ಸಂಘಟನೆ ಮಾಡಿದ ಪ್ರಮುಖ ನಾಯಕರಾಗಿದ್ದರು ಎನ್ನುವುದನ್ನು ಲೇಖಕರು ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಕೃಷ್ಣ ಶೆಟ್ಟಿಯವರ ಪುಸ್ತಕದ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ,ವಸಂತರಾಜ ಎನ್.ಕೆ ಮೊದಲಾದವರು ಉಪಸ್ಥಿತರಿದ್ದರು.
ವಾಸುದೇವ ಉಚ್ಚಿಲ್ ಸ್ವಾಗತಿಸಿದರು. ಸುನಿಲ್ ಕುಮಾರ್ ಬಜಾಲ್ ವಂದಿಸಿದರು. ಯಮುನಾ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು.