ಪ್ರಧಾನಿ, ದೋವಲ್ ರಿಂದ ಓಂ ಪುರಿ ಹತ್ಯೆ ಎಂದ ಪಾಕ್ ಟಿವಿ !

Update: 2017-01-08 15:58 GMT

ಮುಂಬೈ, ಜ. 8 : ಖ್ಯಾತ ನಟ ಓಂ ಪುರಿ ಸಾವಿನ ಸುತ್ತ ಈಗ ಸಂಶಯದ ಹುತ್ತ ಸೃಷ್ಟಿಯಾಗಿದೆ. ಮೊದಲು ಹೃದಯಾಘಾತದಿಂದ ನಿಧನರಾದರು ಎಂದು ಹೇಳಲಾಗಿತ್ತು. ಆದರೆ ಅವರ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿವೆ ಎಂದು ಹೇಳಲಾಯಿತು. ಅದಕ್ಕೆ ಪೂರಕವಾಗಿ ಪೊಲೀಸರೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದರು. 

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗಿದೆ. ಇದು ಪಾಕಿಸ್ತಾನದ ಬೋಲ್ ಎಂಬ ಟಿವಿ ಚಾನಲ್ ನಲ್ಲಿ ಪ್ರಸಾರವಾದ ಸುದ್ದಿ ಕಾರ್ಯಕ್ರಮದ ವೀಡಿಯೊ. ಈ ಪಾಕ್ ಸುದ್ದಿ ಚಾನಲ್ ಪ್ರಕಾರ "ಓಂ ಪುರಿಯವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆ ಮಾಡಿಸಿದ್ದಾರೆ !" ಆದರೆ ಸುದ್ದಿಯ ಹೆಸರಲ್ಲಿ ಪ್ರಧಾನಿ ಹಾಗು ರಾಷ್ಟ್ರೀಯ ಭದ್ರತಾ ಸಲಹೆಗಾರರ ವಿರುದ್ಧ ನೇರವಾಗಿ ಆರೋಪ ಹೊರಿಸುವ ಹಾಗು ಅವರ ವಿರುದ್ಧ ಅವಾಚ್ಯ ಪದಗಳನ್ನು ಬಳಸುವ ನಿರೂಪಕ ಈ ಚಾನಲ್ ಈ ಗಂಭೀರ ಆರೋಪಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವುದಿಲ್ಲ. 

ಪ್ರಧಾನಿ ಮೋದಿ " ಯಾವುದೇ ಕೃತ್ಯ ಮಾಡಲು ಹೇಸುವುದಿಲ್ಲ" ಎಂದು ಹೇಳುವ ಚಾನಲ್ ಅದಕ್ಕೆ ತನ್ನ ಬಳಿ  ಸಾಕ್ಷ್ಯವಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ವಿರುದ್ಧ ಹೇಳಿಕೆ ನೀಡಿರುವ ವೀಡಿಯೊವೊಂದನ್ನು ತೋರಿಸುತ್ತದೆ. 

ಪಾಕಿಸ್ತಾನದ ಅತಿ ದೊಡ್ಡ ಚಾನಲ್ ತನ್ನದೆಂದು ಹೇಳಿಕೊಳ್ಳುವ ಬೋಲ್ ಚಾನಲ್ ಓಂ ಪುರಿ ಹತ್ಯೆಯ ಹೊಣೆಯನ್ನು ನೇರವಾಗಿ ಪ್ರಧಾನಿ ಮೋದಿ ಹಾಗು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಮೇಲೆ ಹೊರಿಸಿದೆ. "ವಾರದ ಹಿಂದೆ ಓಂ ಪುರಿಯನ್ನು ದೆಹಲಿಗೆ ಕರೆಸಿಕೊಂಡ ದೋವಲ್ ಅವರನ್ನು ಅತ್ಯಂತ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿ ಹುತಾತ್ಮ ಯೋಧ ನಿತಿನ್ ಯಾದವ್ ರನ್ನು ಅವಮಾನಿಸಿದ ನೀವು ಅವರ ಗ್ರಾಮಕ್ಕೆ ತೆರಳಿ ಕ್ಷಮೆ ಯಾಚಿಸಿ, ಜೋರಾಗಿ ಅಳಬೇಕು ಎಂದು ಬೆದರಿಕೆ ಹಾಕಿದ್ದರು" ಎಂದಿದೆ.   ಚಾನಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ " ಓಂ ಪುರಿಯನ್ನು ದಿಲ್ಲಿಯಲ್ಲಿ ನಗ್ನಗೊಳಿಸಿ ಮನೆಯೊಂದರಲ್ಲಿ ಇಡಲಾಗಿತ್ತು " ಎಂದು ಹೇಳಿದೆ. 

ಚಾನಲ್ ಪ್ರಕಾರ "ಆ ಬಳಿಕ ಓಂ ಪುರಿಯನ್ನು ರಾ ಅಧಿಕಾರಿಗಳ ನಿಗಾದಲ್ಲಿ ನಿತಿನ್ ಯಾದವ್ ಅವರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕ್ಷಮೆ ಕೇಳಿಸಲಾಗಿತ್ತು." ಆದರೆ ಈ ಬಗ್ಗೆ ತನ್ನಲ್ಲಿ ಸಮಗ್ರ ಸಾಕ್ಷ್ಯಗಳಿವೆ ಎಂದು ಹೇಳಿಕೊಳ್ಳುವ ಈ ಚಾನಲ್ ಆ ಸಾಕ್ಷ್ಯಗಳು ಯಾವುದು ಎಂದು ವಿವರ ನೀಡುವುದಿಲ್ಲ.  

ಈ ಚಾನಲ್ ಪ್ರಕಾರ " ಓಂ ಪುರಿಗೆ ಬಲವಂತವಾಗಿ ಮದ್ಯ ಕುಡಿಸಿ ಅವರು ಪ್ರಜ್ಞೆ ತಪ್ಪಿದ ಬಳಿಕ ತಲೆದಿಂಬನ್ನು ಒತ್ತಿ ಅವರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಓಂ ಪುರಿಯವರ ಕೈ ಬೆರಳಿನ ಉಗುರುಗಳಲ್ಲಿ ಹಂತಕನ ಚರ್ಮದ ಅಂಶಗಳು ಪತ್ತೆಯಾಗಿವೆ ". 

ಇಷ್ಟಕ್ಕೇ ನಿಲ್ಲದ ಬೋಲ್ ಚಾನಲ್ , "ಸಲ್ಮಾನ್ ಖಾನ್ , ಮಹಿರಾ ಖಾನ್  ಹಾಗು ಫವಾದ್ ಖಾನ್ ಅವರನ್ನು ಕೊಲೆ ಮಾಡಲು ಸಂಚು ಹೂಡಲಾಗಿದೆ. ರಈಸ್ ಚಿತ್ರದ ಪಾರ್ಟಿಗೆ ಆಹ್ವಾನಿಸಿ ಮಹಿರಾ ಖಾನ್ ಅವರನ್ನು ಹತ್ಯೆಗಯ್ಯಲಾಗುವುದು" ಎಂದು ಹೇಳಿದೆ. 

ಆದರೆ ಈ ಸುದ್ದಿಯನ್ನು ತಾನೇ ಮೊದಲು ಪ್ರಸಾರ ಮಾಡಿದೆ ಎಂದು ಹೇಳಿಕೊಳ್ಳುವ ಚಾನಲ್  ತನ್ನ ವಾದಕ್ಕೆ ಯಾವುದೇ ದಾಖಲೆ , ಸಾಕ್ಷ್ಯ ಒದಗಿಸುವುದಿಲ್ಲ.  ಹೆಚ್ಚಾಗಿ ಪತ್ರಿಕಾ ವರದಿಗಳನ್ನು, ಓಂ ಪುರಿ ವಿರುದ್ಧ ಬಂದಿರುವ ಟ್ವೀಟ್ ಗಳನ್ನು ಈ ಕಾರ್ಯಕ್ರಮದಲ್ಲಿ ಆಗಾಗ ತೋರಿಸಲಾಗಿದೆ. ಎಕ್ಸ್ ಕ್ಲೂಸಿವ್ ಸುದ್ದಿ ಎಂದು ಪ್ರಸಾರವಾಗುವ ಈ ಅರ್ಧ ಗಂಟೆಯ ಕಾರ್ಯಕ್ರಮ ಹೆಚ್ಚಾಗಿ ಗಂಭೀರ, ಕೀಳು ಅಭಿರುಚಿಯ ಆರೋಪಗಳನ್ನು  ಮಾಡುವ ಭಾಷಣದ ರೂಪದಲ್ಲಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News