ಸುರತ್ಕಲ್ : ಕುಡ್ಲ ತುಳು ಮಿನದನ ಕಾರ್ಯಕ್ರಮ

Update: 2017-01-08 16:18 GMT

ಸುರತ್ಕಲ್, ಜ.8: ತುಳುನಾಡಿಗೆ ತಾಯಿಯ ಸ್ಥಾನವನ್ನು ನೀಡುವ ಮುನ್ನ ಹೆತ್ತ ತಾಯಿಯನ್ನು ಪ್ರೀತಿಸುವ ಜೊತೆಗೆ ಜವಾಬ್ದಾರಿಗಳನ್ನು ಅರಿತು ಬಾಳಲು ಕಲಿಯಬೇಕಿದೆ ಎಂದು ಪದ್ಮೂಷಣ ಪ್ರೊ. ಬಿ.ಎಂ. ಹೆಗ್ಡೆ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಯೋಜನೆಯಲ್ಲಿ ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆಯ ಜಂಟಿ ಸಹಕಾರದಲ್ಲಿ ಸುರತ್ಕಲ್ ಬಂಟರ ಸಂಘದಲ್ಲಿ ರವಿವಾರ ನಡೆದ ಕುಡ್ಲ ತುಳು ಮಿನದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ.ಮೊದಿನ್ ಬಾವಾ, ಜಗತ್ತಿನ ಮೂಲೆ ಮೂಲೆಯಲ್ಲೂ ತುಳುನಾಡಿನ ಜನರು ಜನಮನ್ನಣೆ ಪಡೆದಿದ್ದಾರೆ. ಮುಂದಿನ ಪೀಳಿಗೆಗೆ ತುಳುವನ್ನು ತಲುಪಿಸುವ ಕೆಲಸಕ್ಕೆ ಸಹಕಾರ ನೀಡಬೇಕಾದ ಅನಿವಾರ್ಯತೆ ನಮ್ಮಲ್ಲಿದೆ ಎಂದರು.
   
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ತುಳುನಾಡನ್ನು ಉಳಿಸುವ ಹೋರಾಟಗಳ ಮಧ್ಯೆಯೂ ಬೃಹತ್ ಕೈಗಾರಿಕೆಗಳು ತಲೆ ಎತ್ತುತ್ತಾ ತುಳುನಾಡನ್ನು ವಿನಾಶದ ಹಾದಿಗೆ ತಂದಿಡುತ್ತಿದೆ. ಈ ಬಗ್ಗೆ ಜನ ಜಾಗೃತಿ ಮೂಡಿಸಬೇಕಿದೆ ಎಂದರು .

ಇದೆ ಸಂದರ್ಭ ಕಂದಾಯ ಇಲಾಖೆಯ ಸಮಾಲೋಚನೆ ವಿಪತ್ತು ನಿರ್ವಹಣೆಯ ಯೋಜನಾ ವ್ಯವಸ್ಥಾಪಕ ಕೆ. ಸುಧಾಕರ ಶೆಟ್ಟಿ ಬಾಳ ದಂಪತಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಮೋಹನ್ ಕೊಪ್ಪಲ, ಪ್ರೊ. ಡಿ. ವೇದಾವತಿ, ಜಯಶೀಲ, ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಪೂಂಜ, ಹೋಟೆಲ್ ಉದ್ಯಮಿ ಟಿ.ರವೀಂದ್ರ ಪೂಜಾರಿ, ಮಂಗಳೂರು ನಾಗರಿಕ ವೇದಿಕೆಯ ಅಧ್ಯಕ್ಷ ಸುಭಾಷ್‌ಚಂದ್ರ ಶೆಟ್ಟಿ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ, ಮನಪಾದ ಕಾರ್ಪೊರೇಟರ್ ಗುಣಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯೆ ರೂಪಕಲಾ ಆಳ್ವಾ ಸ್ವಾಗತಿಸಿದರು. ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ವಂದಿಸಿದರು. ಅಕಾಡೆಮಿ ಸದಸ್ಯ ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸುರತ್ಕಲ್ ಸೂರಜ್ ಹೋಟೆಲ್‌ನಿಂದ ಬಂಟರ ಸಂಘಕ್ಕೆ ಅತಿಥಿಗಳೊಂದಿಗೆ ಸಂಘಟಕರು, ಕಾರ್ಯಕರ್ತರು, ಬಂಟರ ಸಂಘದ ಸದಸ್ಯರ ವಿಶೇಷ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News