ಹೊಸ ನೇತಾಗೆ ಶರಣಾದ ಸಮಾಜವಾದಿ ನೇತಾಜಿ ಹೇಳಿದ್ದೇನು ?
ಹೊಸದಿಲ್ಲಿ, ಜ. 8 : ಸಮಾಜವಾದಿ ಪಕ್ಷದ ಒಳಜಗಳದಲ್ಲಿ 'ನೇತಾಜಿ' ಈಗ ಹೊಸ ನೇತಾ ಬಗ್ಗೆ ಮುಲಾಯಂ ಆದಂತೆ ಕಂಡು ಬರುತ್ತಿದೆ. ಪಕ್ಷವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿರುವ ಪುತ್ರ ಅಖಿಲೇಶ್ ಗೆ ಅವರಿಚ್ಛೆಯಂತೆ ಪಕ್ಷವನ್ನು ನಡೆಸಲು ಬಿಟ್ಟು ಬಿಡುವ ಸೂಚನೆಯನ್ನು ನಾಯಕ ಮುಲಾಯಂ ಸಿಂಗ್ ನೀಡಿದ್ದಾರೆ. ದಿಲ್ಲಿಯಲ್ಲಿ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಕ್ಕೆ ಬಂದಾಗ ಅವರು ಈ ರೀತಿ ಮಾತನಾಡಿದ್ದಾರೆ.
ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ಪತ್ರಕರ್ತರು ಕೇಳಿದಾಗ " ಅಖಿಲೇಶ್ ನನ್ನ ಮಗ. ಈಗ ಎಲ್ಲ ಶಾಸಕರು ಅವನ ಜೊತೆಗಿದ್ದಾರೆ. ನನ್ನ ಜೊತೆ ಇರುವುದು ಕೇವಲ ಬೆರಳೆಣಿಕೆಯ ಶಾಸಕರು. ನಾನೇನು ಅವನನ್ನು ಕೊಲ್ಲಲು ಸಾಧ್ಯವೇ (ಮಾರ್ ಥೋಡಿ ಹೀ ದೇಂಗೆ ಉಸೆ) ? ಅವನು ಏನು ಮಾಡುತ್ತಿದ್ದನೋ ಅದನ್ನು ಮಾಡಲಿ. " ಎಂದು ಮುಲಾಯಂ ಸ್ಪಷ್ಟವಾಗಿ ಹೇಳಿದ್ದಾರೆ.
ಜಗಳ ಯಾವಾಗ ಮುಗಿಯುತ್ತದೆ ಎಂದು ಕೇಳಿದಾಗ " ಜಗಳ ಇದ್ದರೆ ತಾನೇ ಮುಗಿಯುವುದು ? ಪಕ್ಷದೊಳಗೆ ಯಾವುದೇ ಸಮಸ್ಯೆ ಇಲ್ಲ " ಎಂದು ಮುಲಾಯಂ ಹೇಳಿದ್ದಾರೆ. ಅವರು ಸೋಮವಾರ ಚುನಾವಣಾ ಆಯೋಗಕ್ಕೆ ಪಕ್ಷದ ಚಿಹ್ನೆ ವಿಷಯದಲ್ಲಿ ತಮ್ಮ ವಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಿದೆ.
ಅಖಿಲೇಶ್ ಈಗಾಗಲೇ ರಾಮ್ ಗೋಪಾಲ್ ಯಾದವ್ ಮೂಲಕ ಒಂದೂವರೆ ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆ ಸಲ್ಲಿಸಿದ್ದಾರೆ. ಪಕ್ಷದ 205
ಶಾಸಕರು , 56 ವಿಧಾನ ಪರಿಷತ್ ಸದಸ್ಯರು, 15 ಸಂಸದರು ಹಾಗು ರಾಷ್ಟ್ರೀಯ ಕಾರ್ಯಕಾರಿಣಿಯ 30 ಸದಸ್ಯರು ಅಖಿಲೇಶ್ ಪರ ನಿಂತಿದ್ದಾರೆ.
ಜನವರಿ 17 ರೊಳಗೆ ಸೈಕಲ್ ಚಿಹ್ನೆ ಯಾರಿಗೆ ಸಿಗಲಿದೆ ಎಂದು ಚುನಾವಣಾ ಆಯೋಗ ನಿರ್ಧರಿಸಬೇಕಿದೆ. ಬಳಿಕ ರಾಜ್ಯದಲ್ಲಿ ಪ್ರಥಮ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಆಗ ವಿಷಯ ಇತ್ಯರ್ಥವಾಗದಿದ್ದರೆ ಸೈಕಲ್ ಚಿಹ್ನೆ ಯಾರಿಗೂ ಸಿಗುವುದಿಲ್ಲ.