×
Ad

ಮಂಗಳೂರು ಧರ್ಮ ಪ್ರಾಂತ: ಪರಮ ಪ್ರಸಾದ ಮೆರವಣಿಗೆ

Update: 2017-01-08 22:19 IST

ಮಂಗಳೂರು, ಜ. 8: ಮಂಗಳೂರು ಧರ್ಮ ಪ್ರಾಂತದ ವಾರ್ಷಿಕ ಪರಮ ಪ್ರಸಾದ ಮೆರವಣಿಗೆ ಹಾಗೂ ಕಿರು ಕ್ರೈಸ್ತ ಸಮುದಾಯ ಸಂಘಟನೆಗೆ ಸಮರ್ಪಿಸಿದ ವರ್ಷಾಚರಣೆಯ ಉದ್ಘಾಟನೆಯು ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಅವರ ನೇತೃತ್ವದಲ್ಲಿ ರವಿವಾರ ನೆರವೇರಿತು.

ಮಿಲಾಗ್ರಿಸ್ ಚರ್ಚ್‌ನಲ್ಲಿ ಬಲಿ ಪೂಜೆಯ ಬಳಿಕ ರೊಜಾರಿಯೊ ಕೆಥೆಡ್ರಲ್ ತನಕ ನಡೆದ ಮೆರವಣಿಗೆಯಲ್ಲಿ ಮಂಗಳೂರು ನಗರ ಮತ್ತು ಹೊರ ವಲಯದ ಕೆಥೋಲಿಕ್ ಕ್ರೈಸ್ತರು, ಧರ್ಮ ಗುರುಗಳು, ಧರ್ಮ ಭಗಿನಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯ ಬಳಿಕ ರೊಜಾರಿಯೋ ಕೆಥೆಡ್ರಲ್ ಆವರಣದಲ್ಲಿ ಪರಮ ಪ್ರಸಾದದ ಆರಾಧನೆ ನಡೆಯಿತು. ಸುರತ್ಕಲ್ ಚರ್ಚ್‌ನ ಧರ್ಮಗುರು ಹಾಗೂ ಸುರತ್ಕಲ್ ವಲಯದ ಮುಖ್ಯ ಗುರು ಫಾ. ಪಾವ್ಲ್ ಪಿಂಟೊ ಅವರು ಪ್ರವಚನ ನೀಡಿದರು.

ಕಿರು ಕ್ರೈಸ್ತ ಸಮುದಾಯ ಸಂಘಟನೆಯ ವರ್ಷಾಚರಣೆ
 

ಪೋಪ್ ಫ್ರಾನ್ಸಿಸ್ ಅವರು 2017ನೆ ವರ್ಷವನ್ನು ಕಿರು ಕ್ರೈಸ್ತ ಸಮುದಾಯ ಸಂಘಟನೆಯ ವರ್ಷವನ್ನಾಗಿ ಘೋಷಿಸಿದ್ದು, ಬಿಷಪ್ ಅಲೋಶಿಯಸ್ ಪಾವ್ಲ್ ಡಿೞಸೋಜಾ ಅವರು ಪರಮ ಪ್ರಸಾದದ ಆಶೀರ್ವಚನದ ಬಳಿಕ ಕಿರು ಕ್ರೈಸ್ತ ಸಮುದಾಯ ಸಂಘಟನೆಯ ವರ್ಷಾಚರಣೆಯ ಲಾಂಛನವನ್ನು ಅನಾವರಣ ಮಾಡುವ ಮೂಲಕ ಇದಕ್ಕೆ ಚಾಲನೆ ನೀಡಿದರು. 

ಕಿರು ಕ್ರೈಸ್ತ ಸಮದಾಯ ಘಟಕಗಳು ಸಮಾಜದ ಜನರಿಗೆ ಪ್ರಾರ್ಥನೆಯ ಮಹತ್ವ ಮತ್ತು ಶಕ್ತಿಯನ್ನು ತಿಳಿಯ ಪಡಿಸಿ ದೇವರ ಮೇಲಣ ವಿಶ್ವಾಸವನ್ನು ಬಲ ಪಡಿಸಲು, ಸಮಾಜದಲ್ಲಿ ಸೇವೆಯ ಮನೋಭಾವವನ್ನು ಉದ್ದೀಪಿಸಲು, ಸಂಬಂಧವನ್ನು ಬಲಗೊಳಿಸಲು ಒಂದು ಅಸವಾಗಿ ಪರಿಣಮಿಸಿವೆ. ಭಾರತದಲ್ಲಿ ಕಿರು ಕ್ರೈಸತಿ ಸಮುದಾಯ ಸಂಘಟನೆಯಲ್ಲಿ ಮಂಗಳೂರು ಧರ್ಮ ಪ್ರಾಂತ ಮುಂಚೂಣಿಯಲ್ಲಿದೆ. ಈ ವರ್ಷಾಚರಣೆಯು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸಲು ಸಹಾಯಕವಾಗಲಿ ಎಂದು ಬಿಷಪ್ ಅಲೋಶಿಯಸ್ ಆಶಿಸಿದರು.

ಕೆಥೋಲಿಕ್ ಕ್ರೈಸ್ತ ಸಭೆಯು ಫಾತಿಮಾ ಮಾತೆಯ ಶತಾಬ್ದ ಆಚರಣೆಯ ಹೊಸ್ತಿಲಲ್ಲಿದ್ದು, 2017 ಮೇ ತಿಂಗಳಲ್ಲಿ ಶತಾಬ್ದ ಸಮಾರಂಭ ನಡೆಯಲಿದೆ. ಈ ಬಗ್ಗೆ ಜಾಗೃತಿ ಮೂಢಿಸಲಾಗುವುದು ಎಂದು ಬಿಷಪ್ ಹೇಳಿದರು. ಕ್ರೈಸ್ತ ಸಭೆಗಾಗಿ 2016ರಲ್ಲಿ ಅತ್ಯಧಿಕ ಧನ ಸಂಗ್ರಹ ಮಾಡಿದ ಧರ್ಮ ಪ್ರಾಂತದ ಚರ್ಚ್‌ಗಳ ಮುಖ್ಯಸ್ಥರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಧರ್ಮ ಪ್ರಾಂತದ ಪ್ರಧಾನ ಗುರು ಮೊ.ಡೆನಿಸ್ ಮೊರಾಸ್ ಪ್ರಭು, ಪಾಲನಾ ಪರಿಷತ್‌ನ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ರೊಜಾರಿಯೋ ಕೆಥೆಡ್ರಲ್‌ನ ಧರ್ಮಗುರು ಫಾ.ಜೆ.ಬಿ. ಕ್ರಾಸ್ತಾ, ಫಾ.ಪಾವ್ಲ್ ಡಿಸೋಜಾ, ಫಾ.ವಿನ್ಸೆಂಟ್ ಡಿಸೋಜಾ, ಫಾ.ರೋಕಿ ಡಿಸೋಜಾ, ಉಪಾಧ್ಯಕ್ಷ ಟಿ.ಜೆ. ಸೈಮನ್, ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ಫಾ.ವಲೇರಿಯನ್ ಡಿಸೋಜಾ, ಉಪಾಧ್ಯಕ್ಷ ಐವನ್ ಡಿಸೋಜಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News