ಮಂಗಳೂರಿನಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ
ಮಂಗಳೂರು, ಜ. 8: ಅಲ್ಲಿ ಆ ಮಕ್ಕಳು ಕುದುರೆ ಏರಿ ಸವಾರಿ ಮಾಡುತ್ತಿದ್ದರು, ಕುಣಿದು ಕುಪ್ಪಳಿಸುತ್ತಿದ್ದರು, ಇಷ್ಟದ ತಿಂಡಿಗಳನ್ನು ಸವಿಯುತ್ತಿದ್ದರು. ಆ ಮಕ್ಕಳ ಸಂಭ್ರಮ ನೋಡಿ ಹೆತ್ತವರು, ಪೋಷಕರು ಖುಶಿ ಪಡುತ್ತಿದ್ದರು.
ರವಿವಾರ ಈ ದೃಶ್ಯ ಕಂಡು ಬಂದದ್ದು ನಗರದ ಡೊಂಗರಕೇರಿ ಕೆನರಾ ಪ್ರೌಢಶಾಲೆಯಲ್ಲಿ. ಮಂಗಳೂರಿನ ಆಶಾಜ್ಯೋತಿ ಸಂಸ್ಥೆಯು ಪ್ರತಿ ವರ್ಷ ವಿಶಿಷ್ಟ ಮಕ್ಕಳಿಗಾಗಿ ವಿಶಿಷ್ಟ ಮೇಳ ಏರ್ಪಡಿಸುತ್ತಿದ್ದು, ಈ ವರ್ಷದ ಮೇಳದಲ್ಲಿ ಜಿಲ್ಲೆಯ 19 ಶಾಲೆಗಳ 800ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಮಕ್ಕಳ ಸಂಭ್ರಮ ಇಮ್ಮಡಿಗೊಳಿಸಲು 100ಕ್ಕೂ ಅಧಿಕ ಸ್ವಯಂಸೇವಕರು ಇದ್ದುದೂ ವಿಶೇಷ. ಮಕ್ಕಳ ಜತೆ ಪೋಷಕರು ಕೂಡ ತಮ್ಮ ನೋವನ್ನು ಮರೆತು ಸಂತೋಷ ಪಡುವ ಕ್ಷಣ ವರ್ಣಿಸಲಸಾಧ್ಯ.
ಮೇಳದಲ್ಲಿ ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಐಸ್‌ಕ್ಯಾಂಡಿ, ಸಕ್ಕರೆ ಕ್ಯಾಂಡಿ, ಮಜ್ಜಿಗೆ/ಲಸ್ಸಿ, ನೆಲಗಡಲೆ, ಪೋಡಿ, ಚಕ್ಕುಲಿ, ಉಂಡೆ, ಪಾನಿಪುರಿ, ಬೇಲ್‌ಪುರಿ, ಚುರುಮುರಿ ಹೀಗೆ ಬಗೆ ಬಗೆಯ ತಿಂಡಿ ತಿನಿಸುಗಳ 10ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿತ್ತು. ಮಕ್ಕಳ ಸಂಭ್ರಮಕ್ಕಾಗಿ ಕುದುರೆ ಗಾಡಿ, ಕುದುರೆ ಸವಾರಿ, ತಿರುಗುವ ಕುದುರೆ, ತಿರುಗುವ ತೊಟ್ಟಿಲು,ಬಾಲ ಬಿಡಿಸುವುದು, ತಿಲಕ ಇಡುವುದು, ರಿಂಗ್, ಚೆಂಡು ಬಿಸಾಡುವುದು, ಡಬ್ಬಕ್ಕೆ ಗುರಿ ಇಡುವುದು ಇತ್ಯಾದಿ ಆಟೋಟ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲ ಸಂಭ್ರಮದಲ್ಲಿ ಮಿಂದ ಮಕ್ಕಳು ಪರಿಪೂರ್ಣತೆವುಳ್ಳ ಮಕ್ಕಳನ್ನೂ ನಾಚಿಸುವಂತೆ ಮಾಡಿದ್ದು ವಿಶೇಷ.
ಈ ಸಂದರ್ಭ ಉಚಿತ ಕಣ್ಣಿನ ಪರೀಕ್ಷೆ ನಡೆಸಲಾಯಿತು.
ವಿಕಲ ಚೇತನರ ಸಾಧನೆ ಅನನ್ಯ
ಜಗತ್ತಿನಲ್ಲಿ ಇಂದು ಶೇ.15ರಷ್ಟು ವಿಕಲ ಚೇತನರಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಅವರನ್ನು ಅನುಕಂಪದಿಂದ ನೋಡದೆ ನಮ್ಮಿಂದಾಗುವ ಸಹಾಯ ಮಾಡಬೇಕು. ಹೊರತು ಕಾಲೆಳೆಯುವ ಪ್ರಯತ್ನ ಮಾಡಬಾರದು ಎಂದು ಮೇಳವನ್ನು ಉದ್ಘಾಟಿಸಿದ ಕೆನರಾ ಬ್ಯಾಂಕ್‌ನ ಉಪಮಹಾ ಪ್ರಬಂಧಕ ಎಸ್.ಡಿ.ಬಿರಾಧಾರ್ ಹೇಳಿದರು.
ಹುಟ್ಟಿನಿಂದ ಅಥವಾ ಜೀವನದಲ್ಲಿ ಸಂಭವಿಸುವ ಆಕಸ್ಮಿಕ ಅನಾಹುತಗಳಿಂದ ವಿಶಿಷ್ಟಚೇತನರಾಗಿರಬಹುದು. ಆದರೆ ಯಾರೂ ಇಲ್ಲಿ ಪರಿಪೂರ್ಣರಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ನ್ಯೂನ್ಯತೆಗಳು ಇರುತದೆ. ಯಾರೂ ಕೀಳರಿಮೆಗೊಳಗಾಗದೆ ಇಚ್ಛಾಶಕ್ತಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಬಿರಾಧಾರ್ ನುಡಿದರು.
ವಿಶಿಷ್ಟ ಚೇತನರಿಗೆ ನೆರವು ನೀಡಿದಾಗ ಅವರ ಬದುಕಿನಲಲ್ಲಿ ಉತ್ಸಾಹ ಮಾತ್ರವಲ್ಲ, ಅನಿರೀಕ್ಷಿತ ಬದಲಾವಣೆಯನ್ನೂ ಕಾಣಬಹುದಾಗಿದೆ ಎಂದು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಪೊರೇಶನ್ ಬ್ಯಾಂಕ್‌ನ ಮಹಾಪ್ರಬಂಧಕ ಶಿವರಾಜ ಮಿಶ್ರಾ ನುಡಿದರು.
ಕಾರ್ಪೊರೇಶನ್ ಬ್ಯಾಂಕ್‌ನ ಪ್ರಧಾನ ಕಚೇರಿಯ ಡಿಜಿಎಂ ವಿಠಲ್ ಶೆಣೈ ವಿಶಿಷ್ಟ ಚೇತನರ ಮೆರವಣಿಗೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಂಡೊ ವಿರೋಧಿ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ಹಾಗೂ ನವೀನ್ ನಾಯಕ್ ವಾಮಂಜೂರು ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಕ್ಷಮದ ರಾಷ್ಟ್ರೀಯ ಸಂಚಾಲಕ ಡಾ. ಸುಕುಮಾರ್, ವಿಶಿಷ್ಟ ಚೇತನರ ಸಬಲೀಕರಣ ಇಲಾಖೆಯ ಶೋಭಾ, ಸೇವಾ ಭಾರತಿಯ ಮುಕುಂದ್ ಕಾಮತ್, ವಿಶ್ವನಾಥ, ಸಾವಿತ್ರಿ, ಕಾರ್ಯದರ್ಶಿ ಮುರಳಿಧರ ನಾಯ್ಕಿ ಉಪಸ್ಥಿತರಿದ್ದರು.
ಆಶಾಜ್ಯೋತಿಯ ಅಧ್ಯಕ್ಷ ಬಿ.ಶ್ರೀನಿವಾಸ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಮುರಳೀಧರ ನಾಯಕ್ ವಂದಿಸಿದರು.