ಪಿಐಓ ಹಾಗೂ ಓಸಿಐ ಕಾರ್ಡುಗಳ ನಡುವಿನ ವ್ಯತ್ಯಾಸವೇನು? ಅವುಗಳ ಪ್ರಯೋಜನವೇನು?

Update: 2017-01-09 03:26 GMT

ಹೊಸದಿಲ್ಲಿ, ಜ.9: ಬೆಂಗಳೂರಿನಲ್ಲಿ ರವಿವಾರ ನಡೆದ 'ಪ್ರವಾಸಿ ಭಾರತೀಯ ದಿವಸ್' ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಿವಾಸಿ ಭಾರತೀಯ ಸಮುದಾಯವು ಪಿಐಓ ಕಾರ್ಡ್‌ಗಳನ್ನು ಓಸಿಐ ಕಾರ್ಡುಗಳಾಗಿ ಪರಿವರ್ತಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಇವೆರಡರ ನಡುವಿನ ವ್ಯತ್ಯಾಸ ಏನು? ಏಕೆ ಬದಲಾಯಿಸಿಕೊಳ್ಳಬೇಕು ಎಂಬ ನಿಮ್ಮ ಸಂದೇಹಗಳಿಗೆ ಇಲ್ಲಿದೆ ಉತ್ತರ.

ದೇಶದಿಂದ ಹೊರಹೋದ ಭಾರತೀಯರನ್ನು ಮುಖ್ಯವಾಗಿ ಎನ್‌ಆರ್‌ಐ, ಪಿಐಓ ಹಾಗೂ ಓಸಿಐ ಎಂದು ಮೂರು ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಅನಿವಾಸಿ ಭಾರತೀಯ ಅಥವಾ ಎನ್‌ಆರ್‌ಐ, ಎನ್ನುವುದು ಮತ್ತೊಂದು ದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗೆ ಬಳಕೆಯಾಗುವ ಪದ. ಪಿಐಓ ಹಾಗೂ ಓಸಿಐ ವರ್ಗದ ಜನರು ಭಾರತದ ಜತೆ ನಿಕಟ ಸಂಪರ್ಕ ಹಾಗೂ ಪಾಲ್ಗೊಳ್ಳುವಿಕೆ ಹೊಂದಿರುವವರು. ಇವರ ಅಗತ್ಯತೆಗಳಿಗೆ ಅನುಗುಣವಾಗಿ ಸರ್ಕಾರ ಭಾರತೀಯ ಮೂಲದ ವ್ಯಕ್ತಿ (ಪಿಐಓ) ಹಾಗೂ ಭಾರತದ ಸಾಗರೋತ್ತರ ಪ್ರಜೆ (ಓಸಿಐ) ಎಂದು ಕಾರ್ಡ್‌ಗಳನ್ನು ನೀಡುತ್ತದೆ. ಇದರಿಂದ ಭಿನ್ನ ಪ್ರಯೋಜನಗಳಿವೆ.

ಪಿಐಓ ಲಾಭ ಏನು?
ಪಿಐಓ ಕಾರ್ಡ್‌ದಾರರು ಭಾರತ ಪ್ರವಾಸ ಕೈಗೊಳ್ಳಲು ವೀಸಾ ಪಡೆಯುವ ಅಗತ್ಯವಿಲ್ಲ. ವಿದ್ಯಾರ್ಥಿ ಅಥವಾ ಉದ್ಯೋಗಿ ವೀಸಾ ಕೂಡಾ ಈ ಕಾರ್ಡ್‌ದಾರರಿಗೆ ಬೇಕಿಲ್ಲ. ಭಾರತದಲ್ಲಿ ತಂಗಿರುವ ಅವಧಿಯಲ್ಲಿ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಇಂಥ ವ್ಯಕ್ತಿಗಳು ನೋಂದಾಯಿಸಿಕೊಳ್ಳುವುದಕ್ಕೂ ವಿನಾಯ್ತಿ ನೀಡಲಾಗಿದೆ. ಎಲ್ಲ ಆರ್ಥಿಕ, ಹಣಕಾಸಿಗೆ ಸಂಬಂಧಿಸಿದ ಮತ್ತು ಶೈಕ್ಷಣಿಕ ವಿಚಾರದಲ್ಲಿ ಎನ್‌ಆರ್‌ಐಗಳಿಗೆ ಸಿಗುವ ಎಲ್ಲ ಸೌಲಭ್ಯಗಳು ಇವರಿಗೂ ಸಿಗುತ್ತವೆ. ಅಂದರೆ ಆಸ್ತಿ ವರ್ಗಾವಣೆ ಅಥವಾ ಸ್ವಾಧೀನ, ಆಸ್ತಿ ಹೊಂದುವುದು, ವಿಲೇವಾರಿ, ಹೂಡಿಕೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರವೇಶ ಲಭ್ಯವಾಗುತ್ತದೆ. ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವರಿಗೆ ಪ್ರತ್ಯೇಕ ಇಮಿಗ್ರೇಶನ್ ಕೌಂಟರ್ ಕೂಡಾ ಲಭ್ಯ.

ಇತಿಮಿತಿ ಏನು?
ಆದರೆ ಪಿಐಓ ಕಾರ್ಡ್‌ದಾರರಿಗೆ ಮತದಾನದ ಹಕ್ಕು ಇರುವುದಿಲ್ಲ. ಇವರು ಪರ್ವತಾರೋಹಣ ಕೈಗೊಳ್ಳುವಲ್ಲಿ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಸಂರಕ್ಷಿತ ಪ್ರದೇಶಗಳಲ್ಲಿ ಯಾವುದೇ ಸಂಶೋಧನಾ ಕಾರ್ಯ ಕೈಗೊಳ್ಳಬೇಕಿದ್ದರೂ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಮೋದಿ ಹೇಳಿರುವ ಓಸಿಐ ಕಾರ್ಡ್‌ಗಳಲ್ಲಿ ಇದಕ್ಕಿಂತ ಹೆಚ್ಚಿನ ಪ್ರಯೋಜನಗಳಿವೆ.
ಓಸಿಐ ಕಾರ್ಡ್ ಎನ್ನುವುದು ಜೀವಿತಾವಧಿ ವೀಸಾ ಆಗಿದ್ದು, ಭಾರತದ ಪೌರತ್ವ ತ್ಯಜಿಸಿದ ವ್ಯಕ್ತಿಗಳಿಗೆ ನೀಡುವ ಕಾರ್ಡ್ ಇದಾಗಿದೆ.

ಓಸಿಐ ಪ್ರಯೋಜನ ಅನೇಕ
ಈ ಕಾರ್ಡ್‌ದಾರರು ಭಾರತ ಪ್ರವೇಶಕ್ಕೆ ವೀಸಾ ಪಡೆಯುವ ಅಗತ್ಯವಿಲ್ಲ ಹಾಗೂ ಎಫ್‌ಆರ್‌ಆರ್‌ಓ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕಿಲ್ಲ. ಐದು ವರ್ಷಗಳ ಕಾಲ ಭಾರತದಲ್ಲಿ ವಾಸಿಸುವ ಓಸಿಐ ಕಾರ್ಡ್‌ದಾರರು ಭಾರತೀಯ ಪೌರತ್ವ ಪಡೆಯಲು ಅವಕಾಶ ಇದೆ ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇವರಿಗೆ ವಿಶೇಷ ಇಮಿಗ್ರೇಶನ್ ಕೌಂಟರ್ ಇರುತ್ತದೆ. ಓಸಿಐ ಕಾರ್ಡ್‌ದಾರ ವಿಶೇಷ ಬ್ಯಾಂಕ್ ಖಾತೆಯನ್ನೂ ಎನ್‌ಆರ್‌ಐಗಳಂತೆ ತೆರೆಯಬಹುದಾಗಿದ್ದು, ಹೂಡಿಕೆ ಮಾಡಲೂ ಅವಕಾಶ ಇದೆ. ಕೃಷಿಯೇತರ ಭೂಮಿ ಖರೀದಿಸಿ, ಮಾಲಕತ್ವ ಹಕ್ಕು ಚಲಾಯಿಸಲೂ ಅಧಿಕಾರ ಹೊಂದಿರುತ್ತಾರೆ.

ಓಸಿಐ ಕಾರ್ಡ್‌ದಾರರು ಚಾಲನಾ ಪರವಾನಿಗೆ, ಪಾನ್‌ ಕಾರ್ಡ್ ಪಡೆಯಲೂ ಅರ್ಹತೆ ಹೊಂದಿರುತ್ತಾರೆ. ಎನ್‌ಆರ್‌ಐಗಳಂತೆ ಆರ್ಥಿಕ, ಹಣಕಾಸಿಗೆ ಸಂಬಂಧಿಸಿದ ಹಾಗೂ ಶೈಕ್ಷಣಿಕ ಪ್ರಯೋಜನಕ್ಕೂ ಅರ್ಹರಾಗಿದ್ದು, ಮಕ್ಕಳನ್ನು ದತ್ತು ಪಡೆಯಲೂ ಅವಕಾಶವಿದೆ.

ನಿರ್ಬಂಧ
ಆದರೆ ಓಸಿಐ ಕಾರ್ಡ್‌ದಾರರಿಗೆ ಮತದಾನದ ಹಕ್ಕು ಇಲ್ಲ, ಸರ್ಕಾರಿ ಉದ್ಯೋಗ ನಿರ್ವಹಿಸುವಂತಿಲ್ಲ. ಕೃಷಿ ಭೂಮಿ ಖರೀದಿ ಮಾಡುವಂತಿಲ್ಲ. ಸರ್ಕಾರಿ ಕಚೇರಿಗಳಿಗೆ ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಅನುಮತಿ ಇಲ್ಲದೇ ಪ್ರವೇಶಿಸಲು ಅವಕಾಶ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News