×
Ad

ಪ್ರದರ್ಶನದಲ್ಲಿ ಎಡವಿದ ವಿಶ್ವ ವಿಖ್ಯಾತ ಜಾದೂಗಾರ ಡೇವಿಡ್ ಬ್ಲ್ಯಯ್ನ್ :ಬಾಯಿಗೆ ಗುಂಡು

Update: 2017-01-09 11:07 IST

ಲಾಸ್ ವೇಗಸ್, ಜ.9: ವಿಶ್ವ ವಿಖ್ಯಾತ ಜಾದೂಗಾರ ಡೇವಿಡ್ ಬ್ಲ್ಯಯ್ನ್ ತಮ್ಮ ಅಪಾಯಕಾರಿ ಜಾದೂಗಳಿಗೆ ಹೆಸರುವಾಸಿ. ಆದರೆ ಇಲ್ಲಿನ ಎಂಜಿಎಂ ಗ್ರ್ಯಾಂಡ್ ಅರೀನಾದಲ್ಲಿ ಅವರ ಇಂತಹ ಪ್ರದರ್ಶನವೊಂದರ ವೇಳೆ ಡೇವಿಡ್ ಪಕ್ಕನೆ ಎಡವಿಬಿಟ್ಟಿದ್ದರು. ಪರಿಣಾಮ ಗುಂಡು ನೇರವಾಗಿ ಅವರ ಬಾಯಿಗೇ ಹೊಕ್ಕಿತ್ತು. ಸತ್ತು ಬದುಕುಳಿದೆ ಎಂಬಂತಹ ಅನುಭವ ತನಗಾಯಿತು ಎಂದು ನಂತರ ಅವರು ಹೇಳಿಕೊಂಡಿದ್ದಾರೆ.

ರೈಫಲ್ ಒಂದರ ಟ್ರಿಗರ್ ಒತ್ತಿಗುಂಡನ್ನು ತನ್ನ ಬಾಯಿಯಲ್ಲಿ ಹಿಡಿಯುವ ಜಾದೂ ಇದಾಗಿತ್ತು. ಅವರ ಇ4 ಶೋ- ಬಿಯಾಂಡ್ ಮ್ಯಾಜಿಕ್ ಶೋ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಈ ಜಾದೂ ಅಂಗವಾಗಿ ಅವರು ತಮ್ಮ ಬಾಯಿಯಲ್ಲಿ ಒಂದು ಲೋಹದ ಕಪ್ ಹೊಂದಿದ್ದರು ಹಾಗೂ ಅವರ ಹಲ್ಲುಗಳಿಗೆ ಗಮ್ ಶೀಲ್ಡ್ ಅಳವಡಿಸಲಾಗಿತ್ತು.

ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡುತ್ತಿದ್ದಂತೆಯೇ ಅವರು ತಮ್ಮೆದುರಿಗಿರುವ ರೈಫಲ್ ನ ಟ್ರಿಗರ್ ಒತ್ತಿಯೇಬಿಟ್ಟರು. ಗುಂಡು ನೇರವಾಗಿ ಅವರ ಬಾಯಲ್ಲಿದ್ದ ಕಪ್ ಒಳಗೇ ಬಿದ್ದುಬಿಟ್ಟರೂ ಅವರ ಹಲ್ಲುಗಳ ರಕ್ಷಣೆಗೆಂದು ಅಳವಡಿಸಲಾಗಿದ್ದ ಗಮ್ ಶೀಲ್ಡ್ ಚೂರಾಗಿ ಆ ಕಪ್ ನೇರವಾಗಿ ಅವರ ಗಂಟಲಿನತ್ತ ಧಾವಿಸಿ ಬಿಟ್ಟಿತ್ತು.

ಅದೃಷ್ಟಾವಶಾತ್ ಯಾವುದೇ ಅಪಾಯಗಳಿಲ್ಲದೆ ಅವರು ಪಾರಾದರೂ ಇದೀಗ ಅವರ ಸ್ನೇಹಿತರು ಮುಂದೆ ಇಂತಹ ಸ್ಟಂಟ್ ಗಳಿಗೆ ಸಹಾಯ ಮಾಡದಿರಲು ನಿರ್ಧರಿಸಿದ್ದಾರೆ. ಈ ಅಪಾಯಕಾರಿ ಜಾದೂವನ್ನು ಅವರು 2010ರಿಂದ ಮೂರು ಬಾರಿ ಪ್ರದರ್ಶಿಸಿದ್ದರಲ್ಲದೆ ತಮ್ಮ ಮುಂಬರುವ ವಿಶ್ವ ಪರ್ಯಟನೆಯ ಸಂದರ್ಭವೂ ಇದನ್ನು ಪ್ರದರ್ಶಿಸುವ ಇರಾದೆ ಅವರಿಗಿದೆ.

''ಗ್ರ್ಯಾಂಡ್ ಗಾರ್ಡನ್ ಅರೀನಾದಲ್ಲಿ 20,000 ಜನರ ಸಮ್ಮುಖದಲ್ಲಿ ಈ ಜಾದೂ ಪ್ರದರ್ಶಿಸಲು ನಾನು ಬದ್ಧವಾಗಿದ್ದೆ. ಆದರೆ ನನ್ನ ಬಾಯಿಯನ್ನು ರಕ್ಷಿಸಲು ಅಳವಡಿಸಲಾಗಿದ್ದ ಗಮ್ ಶೀಲ್ಡ್ ಗುಣಮಟ್ಟದ ಬಗ್ಗೆ ಹೆಚ್ಚಿನ ಮಹತ್ವ ನೀಡಿರಲಿಲ್ಲ ಎಂದು ನನಗನಿಸುತ್ತದೆ'' ಎಂದು ಅವರು ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News