ಜ.11, 12 ರಂದು ನ್ಯಾಷನಲ್ ವೆಂಡರ್ ಡೆವಲಪ್‌ಮೆಂಟ್-ವಸ್ತು ಪ್ರದರ್ಶನ
ಉಡುಪಿ, ಜ.9: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾರು ಕಟ್ಟೆ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ನ್ಯಾಷನಲ್ ವೆಂಡರ್ ಡೆವಲಪ್ ಮೆಂಟ್ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನವನ್ನು ಜ.11 ಮತ್ತು 12 ರಂದು ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾಗಿದೆ.
ಜ.11ರಂದು ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ವಸ್ತುಪ್ರದರ್ಶನವನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿರುವರು. 12ರಂದು ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಂಗಳೂರು ಎಂಎಸ್ ಎಂಇ ಅಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಕೆ.ಸಾಕ್ರಟೀಸ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ತಾಂತ್ರಿಕ ಅಧಿವೇಶನ, ಉದ್ಯಮ ಶೀಲತಾ ಪ್ರೇರಣಾ ಶಿಬಿರ ಹಾಗೂ ಚರ್ಚಾಗೋಷ್ಠಿಗಳು ನಡೆಯಲಿವೆ. ವಸ್ತು ಪ್ರದರ್ಶನದಲ್ಲಿ ಸೂಕ್ಷ್ಮ, ಸಣ್ಣ, ಮಾಧ್ಯಮ ಉದ್ಯಮ, ಸೌತ್ ವೆಸ್ಟರ್ನ್ ರೈಲ್ವೆ, ಎಂಆರ್‌ಪಿಎಲ್, ಬ್ಯಾಂಕ್ ಸಹಿತ ವಿವಿಧ ಕಂಪೆನಿಗಳ 70 ಸ್ಟಾಲ್‌ಗಳನ್ನು ಇಡಲಾಗುತ್ತದೆ ಎಂದು ಅವರು ಹೇಳಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಎಂಎಸ್ ಎಂಇ ಅಭಿವೃದ್ಧಿ ಸಂಸ್ಥೆ ಮಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಎಂಎಸ್‌ಎಂಇಡಿಯ ಸುಂದರ್ ಶೇರಿಗಾರ್, ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಮೂರ್ತಿ, ನಟರಾಜ್ ಪ್ರಭು, ಕೃಷ್ಣರಾಜ್ ಕೊಡಂಚ, ವಾಮನ ನಾಯಕ್ ಉಪಸ್ಥಿತರಿದ್ದರು.