×
Ad

ಎರಡು ವರ್ಷದಿಂದ ಪ್ರಶಾಂತ್‌ ಕೈ ಸೇರದ ಆಧಾರ್

Update: 2017-01-09 19:14 IST

ಪಡುಬಿದ್ರಿ, ಜ.9 : ಕಳೆದ ಎರಡು ವರ್ಷಗಳಲ್ಲಿ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಪ್ರಶಾಂತ್ ಆರ್ ಶೆಟ್ಟಿ ಎಂಬುವವರು ಮೂರು ಬಾರಿ ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಿಯೂ ಇನ್ನೂ ಗುರುತು ಕಾರ್ಡ್ ಕೈಸೇರಲಿಲ್ಲ.

ಪ್ರಶಾಂತ್ ಅವರು 8-6-2015ರಂದು ಪ್ರಥಮ ಬಾರಿಗೆ ಕಾಪು ನೆಮ್ಮದಿ ಕೇಂದ್ರದಲ್ಲಿ ಆಧಾರ್ ನೋಂದಣಿ ಮಾಡಿಸಿದ್ದರು. ಅದಕ್ಕೆ ಸ್ವೀಕೃತಿ ಪತ್ರವನ್ನೂ ಪಡೆದಿದ್ದರು. ಹೀಗಿದ್ದು ಮೂರು ತಿಂಗಳು ಕಳೆದರೂ ಆಧಾರ್ ಕಾರ್ಡ್ ಅವರ ಕೈಸೇರಲಿಲ್ಲ. ಆಧಾರ್ ಬಗ್ಗೆ ಮಾಹಿತಿ ಪಡೆಯಲು ಇರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಸಮರ್ಪಕ ಮಾಹಿತಿ ಸಿಗಲಿಲ್ಲ. ಮತ್ತೊಮ್ಮೆ ಕರೆ ಮಾಡಿದಾಗ ಅಲ್ಲಿ ಕರೆಯನ್ನೇ ಸ್ವೀಕರಿಸಲಿಲ್ಲ. ಸ್ವೀಕೃತಿ ಪತ್ರ ಹಿಡಿದು ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಧಾರ್ ವೆಬ್‌ಸೈಟ್‌ನಲ್ಲಿ ವೀಕ್ಷಿಸಿದರೂ ಕಾರ್ಡ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದಾದ ಬಳಿಕ ಪ್ರಶಾಂತ್ 3-9-2016ಕ್ಕೆ ಮತ್ತೆ ಕಾಪು ನೆಮ್ಮದಿ ಕೇಂದ್ರಕ್ಕೆ ತೆರಳಿ ಆಧಾರ್ ನೋಂದಣಿ ಮಾಡಿಸಿ ಸ್ವೀಕೃತಿ ಪತ್ರ ಪಡೆದರು. 11 ತಿಂಗಳು ಕಳೆದರೂ ಮತ್ತೂ ಅವರಿಗೆ ಆಧಾರ್ ಕಾರ್ಡ್ ಬರಲಿಲ್ಲ.

ಆಧಾರ್ ಅಗತ್ಯತೆಯಿಂದ  ಮತ್ತೆ ಮೂರನೇ ಭಾರಿಗೆ ಪಡುಬಿದ್ರಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಆಧಾರ್ ನೋಂದಣಿ ಪ್ರಕ್ರಿಯೆಯಲ್ಲಿ ನೋಂದಣಿ ಮಾಡಿಸಿದರು. ಇದೀಗ ನೋಂದಣಿ ಮಾಡಿ ಏಳು ತಿಂಗಳಾದರೂ ಆಧಾರ್ ಕಾರ್ಡ್ ಪ್ರಶಾಂತ್ ಅವರ ಕೈಸೇರಲಿಲ್ಲ. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಪ್ರಶಾಂತ್ ಮಾಹಿತಿ ನೀಡಿದರು.

ನ್ಯಾಯಾಲಯ ಆಧಾರ್ ಕಡ್ಡಾಯವಲ್ಲವೆಂದು ಹೇಳಿದರೂ ಸರ್ಕಾರ ಎಲ್ಲಾ ಸವಲತ್ತು ಪಡೆಯಲು ಆಧಾರ್ ಕಡ್ಡಾಯ ಮಾಡಿದೆ. ಪ್ರಶಾಂತ್ ಅವರು ಸ್ವ ಉದ್ಯೋಗ ಮಾಡುವ ಸಲುವಾಗಿ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದು, ಬ್ಯಾಂಕ್‌ನಲ್ಲಿ ಆಧಾರ್ ನೀಡುವಂತೆ ಒತ್ತಾಯಿಸಿದ್ದಾರೆ. ಆಧಾರ್ ಇಲ್ಲದೆ ಸಾಲ ಪಡೆಯಲು ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದರು.

ಅಲ್ಲದೆ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದ್ದರಿಂದ ಆಧಾರ್ ಕಾರ್ಡ್ ಇಲ್ಲದೆ ಅವರ ಹೆಸರು ಪಡಿತರ ಚೀಟಿಯಿಂದಲೂ ತಪ್ಪಿ ಹೋಗಿದೆ. ಒಟ್ಟಿನಲ್ಲಿ ಪ್ರಜೆಗಳ ಅನುಕೂಲಕ್ಕಾಗಿ ಸರಕಾರ ಮಾಡುವ ಯಾವುದೇ ಯೋಜನೆ ಯೋಚನೆಗಳು ಇಲಾಖೆಯ ಯಾರದೋ ತಪ್ಪಿನಿಂದಾಗಿ ಜನ ಸಾಮಾನ್ಯರಿಗೆ ಸಮರ್ಪಕವಾಗಿ ತಲುಪದೆ ಪಾಡು ಪಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News