×
Ad

ಅನ್ನದ ಬಟ್ಟಲು, ಚಮಚ ಬೀದಿಗೆ ತಂದ ಮಂಗಳೂರು ಮಹಿಳೆಯರು

Update: 2017-01-09 19:31 IST

ಮಂಗಳೂರು,ಜ.9:ದೇಶದಲ್ಲಿ ಬಡವರು,ರೈತರು,ಕೃಷಿಕರು ತಮ್ಮ ಹಣಕ್ಕಾಗಿ ಬೀದಿಯಲ್ಲಿ ಎಟಿಎಂ ಮುಂದೆ ಬಂದು ದಿನನಿತ್ಯ ಕಾಯುವಂತಾಗಿರುವುದು ಪ್ರಪಂಚದ ಬೇರೆ ಯಾವ ದೇಶದಲ್ಲೂ ಈ ರೀತಿಯ ನಾಚಿಗೇಡಿನ ಪರಿಸ್ಥಿತಿ ಬಂದಿರಲಿಲ್ಲ. ಭಾರತಕ್ಕೆ ಪ್ರಧಾನಿ ಮೋದಿ ಆಡಳಿತ ದ ಮೂಲಕ ಈ ಸ್ಥಿತಿ ಬಂದಿದೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಶಕುಂತಳಾ ಶೆಟ್ಟಿ ಟೀಕಿಸಿದರು.

ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಯ ಕಚೇರಿಯ ಎದುರು ಇಂದು ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರು ನನಗೆ 50 ದಿನ ಕೊಡಿ ಕಪ್ಪು ಹಣತರುತ್ತೇನೆ ಎಂದರು .ಈಗ ಆ ವಿಷಯವನ್ನೇ ಮಾತನಾಡುತ್ತಿಲ್ಲ. ವಿದೇಶದ ಕಪ್ಪು ಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಹಣ ಹಾಕುತ್ತೇನೆ ಎಂದು ಜನರಲ್ಲಿ ಹಣದ ಆಸೆ ಹುಟ್ಟಿಸಿ ದೇಶದ ಆರ್ಥಿಕ ಸ್ಥಿತಿಯನ್ನು ದುಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಸಹಕಾರಿ ಸಂಘಗಳಿಗೆ ಹೋದರೆ ಜನರು ಬ್ಯಾಂಕ್‌ಗಳಲ್ಲಿ ಇಟ್ಟ ಹಣ ತೆಗೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.  ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಒಂದೇ ಬಾರಿಗೆ ಮಾರಾಟ ಮಾಡಲಾಗದ ಸ್ಥಿತಿ ಬಂದಿದೆ .  ಇಂತಹ ದುಸ್ಥಿತಿ ದೇಶದಲ್ಲಿ ಉಂಟಾಗಲು ಆಡಳಿತದಲ್ಲಾಗಿರುವ ಅವ್ಯಸ್ಥೆಯೇ ಕಾರಣ ಎಂದು ಶಕುಂತಳಾ ಶೆಟ್ಟಿ ತಿಳಿಸಿದರು.

ಈ ಮಹಿಳೆಯರು ಅನ್ನದ ಬಟ್ಟಲು, ಚಮಚ ತಂದು ಅದನ್ನು ಬಡಿದು, ಮೋದಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.

ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ,ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ,ಮರಿಯಮ್ಮ ಥೋಮಸ್,ನಮಿತಾ ಡಿ.ರಾವ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಹಿಯುದ್ಧೀನ್ ಬಾವ, ಎಐಸಿಸಿ ಸದಸ್ಯ ಪಿ.ವಿ.ಮೋಹನ್,  ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News