ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ
ಪುತ್ತೂರು , ಜ.9 : ಜಾನಪದೀಯ ನೆಲೆಗಟ್ಟಿನ ಸ್ಪರ್ಧೆಗಳನ್ನು ವೇದಿಕೆಗಳಲ್ಲಿ ಪ್ರಸ್ತುತಪಡಿಸಲು ಅನುಕೂಲ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಯುವಕ ಯುವತಿ ಮಂಡಲಗಳಿಗೆ ಜಿಲ್ಲಾ ಮಟ್ಟದ 2 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದು ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಅವರು ಕಾಣಿಯೂರಿನಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ , ಯುವಜನ ಮೇಳಗಳಿಗೆ ಕನಿಷ್ಠ ಅನುದಾನ ಮೀಸಲಾಗಿಡುತ್ತಿರುವುದು ಖೇದಕರ ವಿಚಾಯ ಸರ್ಕಾರ ಯುವಜನ ಇಲಾಖೆಯನ್ನು ಸಶಕ್ತಗೊಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯೆ ಲಿತಾ ಈಶ್ವರ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜೀವ್ ಸಾಲ್ಯಾನ್, ಕಾವು ತುಡರ್ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ಬಲ್ಯಾಯ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ’ಸೋಜ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಯುವಜನ ಮೇಳ ಸ್ವಾಗತ ಸಮಿತಿ ಅಧ್ಯಕ್ಷ ಜಯಸೂರ್ಯ ರೈ ಮಾದೋಡಿ ಸ್ವಾಗತಿಸಿದರು.
ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವ ಅಧ್ಯಕ್ಷ ಜನಾರ್ಧನ ಆಚಾರ್ಯ ವಂದಿಸಿದರು. ಗಣೇಶ್ ನಡುವಾಳ್, ಸುಬ್ರಹ್ಮಣ್ಯ ಮತ್ತು ನಂದನ್ ಎಡಮಂಗಲ ನಿರೂಪಿಸಿದರು.
ಬೆಳ್ತಂಗಡಿ, ಪುತ್ತೂರಿಗೆ ಸಮಗ್ರ ಪ್ರಶಸ್ತಿ:
ಜಿಲ್ಲೆಯ 40 ತಂಡಗಳ 400ಕ್ಕೂ ಅಧಿಕ ಸ್ಪರ್ಧಾಳುಗಳು ಯುವಜನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಯುವಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿಗೆ ಹಾಗೂ ಯುವತಿಯರ ವಿಭಾಗದಲ್ಲಿ ಪುತ್ತೂರು ತಾಲೂಕಿಗೆ ಸಮಗ್ರ ಪ್ರಶಸ್ತಿ ಲಭಿಸಿತು.