ಆಶ್ಲೆ ಟೆಲ್ಲಿಸ್ ಮುಂದಿನ ಅಮೆರಿಕ ರಾಯಭಾರಿ?
ಹೊಸದಿಲ್ಲಿ,ಜ.9: ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಆ್ಯಶ್ಲೆ ಟೆಲ್ಲಿಸ್ ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸುವ ಸಾಧ್ಯತೆಗಳು ದಟ್ಟವಾಗಿವೆಯೆಂದು ವಾಶಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಭಾರತದಲ್ಲಿನ ಅಮೆರಿಕದ ಹಾಲಿ ರಾಯಭಾರಿ ರಿಚರ್ಡ್ ವರ್ಮಾ ಅವರು ರವಿವಾರ ಟ್ವೀಟರ್ ಮೂಲಕ ಪ್ರಸಾರ ಮಾಡಿದ ಹೇಳಿಕೆಯೊಂದರಲ್ಲಿ, ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸುವ ದಿನವಾದ ಜನವರಿ 29ರಂದು ತಾನು ಹುದ್ದೆಯಿಂದ ನಿರ್ಗಮಿಸುವುದಾಗಿ ತಿಳಿಸಿದ್ದಾರೆಂದು ಪತ್ರಿಕೆ ಹೇಳಿದೆ.
ಭಾರತೀಯ ವ್ಯವಹಾರಗಳ ತಜ್ಞರಾಗಿರುವ ಆ್ಯಶ್ಲೆ ಟೆಲ್ಲಿಸ್ ಅವರನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆಯೆಂದು ವಾಶಿಂಗ್ಟನ್ ಪೋಸ್ಟ್ ವರದಿ ತಿಳಿಸಿದೆ. ಟ್ರಂಪ್ ಈತನವೂ ತನ್ನ ತಂಡದಲ್ಲಿ ಏಶ್ಯದ ವ್ಯವಹಾರಗಳಲ್ಲಿ ಪರಿಣಿತರಾದ ಒಬ್ಬನೇ ಒಬ್ಬ ರಾಜತಾಂತ್ರಿಕನನ್ನೂ ನೇಮಿಸಿಕೊಂಡಿಲ್ಲ, ಹೀಗಾಗಿ ಭಾರತದ ರಾಯಭಾರಿಯಾಗಿ ಟೆಲ್ಲಿಸ್ ನೇಮಕಗೊಳ್ಳುವುದು ಬಹುತೇಕ ಖಚಿತವೆಂದು ವರದಿಯು ಗಮನಸೆಳೆದಿದೆ.
ಮುಂಬೈನಲ್ಲಿ ಜನಿಸಿದ್ದ 55 ವರ್ಷ ವಯಸ್ಸಿನ ಟೆಲ್ಲಿಸ್ ಪ್ರಸ್ತುತ ವಾಶಿಂಗ್ಟನ್ ಮೂಲದ ಚಿಂತನಾವೇದಿಕೆಯಾದ ಅಂತಾರಾಷ್ಟ್ರೀಯ ಶಾಂತಿಗಾಗಿನ ಕಾರ್ನೆಗಿ ದತ್ತಿ ಪ್ರತಿಷ್ಠಾನದ ಸದಸ್ಯರಾಗಿ ಸೇಸಲ್ಲಿಸುತ್ತಿದ್ದಾರೆ. ನಾಗರಿಕ ಪರಮಾಣು ಒಪ್ಪಂದ ಸೇರಿಂತೆ ಭಾರತದ ಜೊತೆ ಅಮೆರಿಕದ ಬಾಂಧವ್ಯ ವೃದ್ಧಿಯಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದರು.
ಈ ಮೊದಲು ಟೆಲ್ಲಿಸ್ ಅವರು ಹೊಸದಿಲ್ಲಿಯಲ್ಲಿ ಅಮೆರಿಕದ ರಾಯಭಾರಿಯವರ ಹಿರಿಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷರ ವಿಶೇಷ ಸಹಾಯಕರಾಗಿ ಮತ್ತು ನೈಋತ್ಯ ಏಶ್ಯ ಹಾಗೂ ವ್ಯೆಹಾತ್ಮಕ ಯೋಜನೆಗಾಗಿನ ಹಿರಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಭಾರತದಲ್ಲಿ ಬೆಳೆದ ಆ್ಯಶ್ಲೆ ಅವರು ಬಾಂಬೆ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಅಲ್ಲದೆ ಶಿಕಾಗೋ ವಿವಿಯಿಂದ ಪಿಎಚ್‌ಡಿ ಕೂಡಾ ಪಡೆದಿದ್ದಾರೆ. ಅನೇಕ ಪುಸ್ತಕಕೃತಿಗಳನ್ನು ಅವರು ಬರೆದಿದ್ದಾರೆ. ಅಮೆರಿಕದ ಹಾಲಿ ರಾಯಬಾರಿ ರಿಚರ್ಡ್ ವರ್ಮಾ ಅವರನ್ನು ಒಬಾಮ ಆಡಳಿತವು 2015ರ ಆರಂಭದಲ್ಲಿ ನೇಮಿಸಿತ್ತು.