ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಪೂಜಾರಿ ಆಗ್ರಹ
ಮಂಗಳೂರು, ಜ.9: ಬೆಳಗಾವಿಯ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಅವರ ಮಗಳ ಫೇಸ್‌ಬುಕ್‌ನಲ್ಲಿ ಕಮೆಂಟ್ ಹಾಕಿದ್ದರೆಂಬ ಕಾರಣಕ್ಕೆ ಕಾಗೆ ಅವರ ಸಹೋದರ ಸಿದ್ಧಗೌಡ ಹಾಗೂ ಬೆಂಬಲಿಗರು ವಿವೇಕ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ, ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ಧರಾಮಯ್ಯರಿಗೆ ಭಯವೇಕೆ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೆ. ವೈದ್ಯರ ಮೇಲೆ ಹಲ್ಲೆ, ಪ್ರಚೋದನಕಾರಿ ಹೇಳಿಕೆ, ದೌರ್ಜನ್ಯ ಸೇರಿದಂತೆ ರಾಜ್ಯದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಲೇ ಇದೆ. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇರ ಹೊಣೆ ಎಂದು ಆರೋಪಿಸಿದರು.
ಈ ದೇಶದಲ್ಲಿ ಶೇ. 3 ಮಂದಿ ಮಾತ್ರ ತೆರಿಗೆ ಕಟ್ಟುವವರು. ತೆರಿಗೆ ಕಟ್ಟದವರು ಕೋಟ್ಯಂತರ ಜನರಿದ್ದಾರೆ. ತೆರಿಗೆ ಕಳ್ಳರು ತೆರಿಗೆ ಕಟ್ಟುವಂತಹ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋತರೆ ಪ್ರಧಾನಿ ನೇರ ಹೊಣೆಯಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪೂಜಾರಿ ಉತ್ತರಿಸಿದರು.
ಕಾಂಗ್ರೆಸ್ ಮುಖಂಡರಾದ ಅರುಣ್ ಕುವೆಲ್ಲೋ, ಯು. ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.