×
Ad

ಪೆಟ್ರೋಲ್ ಪಂಪ್‌ಗಳಲ್ಲಿ ಕಾರ್ಡ್‌ಗಳಿಗೆ ವಹಿವಾಟು ಶುಲ್ಕ ಇಲ್ಲ : ಕೇಂದ್ರ ನಿರ್ಧಾರ

Update: 2017-01-09 20:51 IST

ಹೈದರಾಬಾದ್,ಜ.9: ಪೆಟ್ರೋಲ್ ಪಂಪ್‌ಗಳಲ್ಲಿ ನಡೆಯುವ ಡೆಬಿಟ್,ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದಿರಲು ಕೇಂದ್ರ ಸರಕಾರ ಸೋಮವಾರ ನಿರ್ಧರಿಸಿದೆ. ವಹಿವಾಟು ಶುಲ್ಕ ಹೇರಿಕೆಯನ್ನು ಪ್ರತಿಭಟಿಸಿ, ಕಾರ್ಡ್‌ಗಳನ್ನು ಸ್ವೀಕರಿಸುವುದಿಲ್ಲವೆಂದು ಪೆಟ್ರೋಲ್ ಪಂಪ್ ಮಾಲಕರು ಬೆದರಿಕೆ ಹಾಕಿದ ಬಳಿಕ ಸರಕಾರ ಈ ತೀರ್ಮಾನ ಕೈಗೊಂಡಿದೆ.

   ಈ ಬಗ್ಗೆ ಹೊಸದಿಲ್ಲಿಯಲ್ಲಿ ಇಂದು ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಪಂಪ್‌ಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ನಡೆಸುವುದಕ್ಕೆ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲವೆಂದು ಹೇಳಿದ್ದಾರೆ. ಪೆಟ್ರೋಲ್ ಪಂಪ್‌ಗಳಲ್ಲಿ ತೈಲ ಖರೀದಿಗಾಗಿ ಗ್ರಾಹಕರು ಕಾರ್ಡ್ ಮೂಲಕ ಮಾಡುವ ಪಾವತಿಗಾಗಿ ಬ್ಯಾಂಕ್‌ಗಳು ವಿಧಿಸುವ ಹೆಚ್ಚುವರಿ ಶುಲ್ಕವನ್ನು ಯಾರು ಭರಿಸಿಕೊಳ್ಳಬೇಕೆಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜೊತೆ ತೈಲ ಮಾರಾಟ ಸಂಸ್ಥೆಗಳು ಮಾತುಕತೆ ನಡೆಸುತ್ತಿವೆಯೆಂದು ಅವರು ತಿಳಿಸಿದ್ದಾರೆ.

 ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ಪಾವತಿಗೆ ವಹಿವಾಟು ಶುಲ್ಕ ವಿಧಿಸುವ ಬ್ಯಾಂಕ್‌ಗಳ ಕ್ರಮವನ್ನು ಪ್ರತಿಭಟಿಸಿ, ಪೆಟ್ರೋಲ್‌ಪಂಪ್‌ಗಳು ಎಲ್ಲಾ ರೀತಿಯ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದವು. ಆದರೆ ಸರಕಾರದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಅವು ಜನವರಿ 13ರವರೆಗೆ ತಮ್ಮ ನಿರ್ಧಾರವನ್ನು ತಡೆಹಿಡಿದಿವೆ.

     ನವೆಂಬರ್ 8ರಂದು ನೋಟು ನಿಷೇಧದ ಬಳಿಕ ನಗದುರಹಿತ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸರಕಾರವು ಇಂಧನದ ಮೇಲಿನ ವ್ಯಾಪಾರಿ ಕಡಿತ ದರವನ್ನು ರದ್ದುಪಡಿಸಿದೆ. ಆದರೆ ನೋಟು ಅಮಾನ್ಯತೆಯ ಬಳಿಕ ಉಂಟಾಗಿದ್ದ ನಗದು ಕೊರತೆಯನ್ನು ನೀಗಿಸಲು ಸರಕಾರವನ್ನು ಕೇಳಿದ್ದ 50 ದಿನಗಳ ಕಾಲಾವಕಾಶ ಮುಗಿಯುತ್ತಿದ್ದಂತೆಯೇ ಬ್ಯಾಂಕ್‌ಗಳು ಇಂಧನದ ಮೇಲೆ ಸರ್ಚಾರ್ಜ್ ವಿದಿಸಲು ನಿರ್ಧರಿಸಿದ್ದವು. ಇದರಿಂದಾಗಿ ಪೆಟ್ರೋಲ್ ಪಂಪ್‌ಗಳು ಎಲ್ಲಾ ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಶೇ.0.25ರಿಂದ ಶೇ.1ರಷ್ಟು ಹಣವನ್ನು ವಹಿವಾಟು ಶುಲ್ಕವಾಗಿ ಬ್ಯಾಂಕ್‌ಗಳಿಗೆ ಪಾವತಿಸಬೇಕಾಗುತ್ತದೆ. ಬ್ಯಾಂಕ್‌ಗಳ ಈ ಕ್ರಮವು ನಗದುರಹಿತ ವಹಿವಾಟನ್ನು ಉತ್ತೇಜಿಸುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯೆಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News